ನವದೆಹಲಿ: ಭಾರೀ ಬಹುಮತದೊಂದಿಗೆ ಮೂರನೇ ಬಾರಿ ದೆಹಲಿ ಜನರ ದಿಲ್ ಕದ್ದಿರುವ ಅರವಿಂದ ಕೇಜ್ರಿವಾಲ್ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸರಳ ಕಾರ್ಯಕ್ರಮ ನಡೆಯಲಿದೆ.
ಕೇಜ್ರಿವಾಲ್ ಜೊತೆಯ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಇತರೆ ರಾಜ್ಯದ ರಾಜಕೀಯ ಗಣ್ಯರನ್ನ ಆಹ್ವಾನಿಸಲಾಗುತ್ತೆ ಎನ್ನಲಾಗಿತ್ತು. ಆದರೆ ಯಾವುದೇ ರಾಜಕೀಯ ಗಣ್ಯರನ್ನ ಆಹ್ವಾನಿಸದಿರಲು ಆಪ್ ನಿರ್ಧರಿಸಿದೆ. ಪ್ರೊಟೊಕಾಲ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಬಿಜೆಪಿಯ ಏಳು ಸಂಸದರಿಗೂ ಆಹ್ವಾನ ನೀಡಿದೆ.
50 ಮಂದಿ ವಿಶೇಷ ಅತಿಥಿಗಳು ಸಾಕ್ಷಿ:
ರಾಜಕೀಯ ನಾಯಕರ ನೆರಳು ಬೀಳದಂತೆ ನೋಡಿಕೊಂಡಿರುವ ಅರವಿಂದ ಕೇಜ್ರಿವಾಲ್ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನು ಆಹ್ವಾನಿಸಿದ್ದಾರೆ. ದಿಲ್ಲಿ ನಿರ್ಮಾಣಕ್ಕೆ ಕಾರಣವಾದ 50 ಮಂದಿ ಪ್ರಮುಖರ ಜೊತೆಗೆ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ದಿಲ್ಲಿಯ ಪ್ರಸಿದ್ಧ ಸಿಗ್ನೇಚರ್ ಬ್ರಿಡ್ಜ್ ನ ವಿನ್ಯಾಸಕಾರರು, ಶಿಕ್ಷಕರು, ಬಸ್ ಮಾರ್ಷಲ್‍ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಸೇರಿದಂತೆ ಒಟ್ಟಾರೆ 50 ಮಂದಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲಿ ಕೇಜ್ರಿವಾಲ್ ಜತೆಗೆ ಇರಲಿದ್ದಾರೆ.
ವೇದಿಕೆಯ ಕೇಂದ್ರ ಬಿಂದು ಚೋಚಾ ಮಫ್ಲರ್ ಮ್ಯಾನ್:
ದೆಲ್ಲಿ ಚುನಾವಣೆ ಫಲಿತಾಂಶ ದಿನ ಆಪ್ ಕೇಂದ್ರ ಕಚೇರಿ ಬಳಿ ಎಲ್ಲರ ಗಮನ ಸೆಳೆದಿದ್ದ ಚೋಟಾ ಮಫ್ಲರ್‌ಮ್ಯಾನ್ ಅಂತಲೇ ಫೇಮಸ್ ಆಗಿದ್ದ ಒಂದು ವರ್ಷದ ಅವ್ಯಾನ್ ಯಥಾವತ್ ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದುವಾಗಲಿದ್ದಾನೆ. ಅರವಿಂದ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವ್ಯಾನ್ ಯಥಾವತ್ ಪೋಷಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅದ್ಧೂರಿಯಲ್ಲದ ತೀರ ಸರಳ ಎನಿಸಿದ ಅರ್ಥಬದ್ದ ಕಾರ್ಯಕ್ರಮಕ್ಕೆ ಆಪ್ ಪ್ಲಾನ್ ಮಾಡಿದ್ದು. ಇಂದಿನಿಂದ ಆಪ್‍ನ ಮತ್ತೊಂದು ಶೆಕೆ ದೆಹಲಿಯಲ್ಲಿ ಆರಂಭವಾಗಲಿದೆ.