ಧಾರವಾಡ: ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ ಯಾವ ರೀತಿ ವೇಷದಲ್ಲಿರಬೇಕು, ತಲೆ ಮೇಲೆ ಟೋಪಿ ಹಾಕಿ, ಗಡ್ಡ ಬಿಟ್ಟುಕೊಂಡು, ಮೀಸೆ ಬೋಳಿಸಿಕೊಂಡು, ಪಾಯಿಜಾಮ ಹಾಕಿಕೊಂಡಾಗ ಹಿಂದೂ ಭಕ್ತರ ಮನಸಿನಲ್ಲಿ ಇವರಿಗ್ಯಾಕೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಅನಿಸುತ್ತದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ಧಾರವಾಡ ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಕಲ್ಲಂಗಡಿ ಒಡೆದ ಘಟನೆ ನಡೆಯಬಾರದಿತ್ತು, ಆದರೆ ಇದು ಯಾಕೆ ಆಗುತ್ತಿದೆ ಎನ್ನುವುದರ ಕುರಿತು ವಿಚಾರ ಮಾಡಬೇಕಿದೆ ಎಂದರು.
ಘಟನೆ ನಡೆಯಲು ಕಾರಣವಾದ ವಿಷಯಗಳ ಬಗ್ಗೆ ನೋಡಬೇಕಿದೆ. ಹೈಕೋರ್ಟ್ ಹಿಜಬ್ ಕುರಿತು ಶಾಲೆಗಳಲ್ಲಿ ಸಮವಸ್ತ್ರ ಧರಿಸಬೇಕು ಎಂದು ತೀರ್ಪು ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಅಂಗಡಿ ಬಂದ್ ಮಾಡಿದ್ದವು. ಆಗಲೇ ಅವರಿಗೆ ಕಾನೂನಿನ ಬಗ್ಗೆ ಕಾಳಜಿ ಹಾಗೂ ಗೌರವ ಇಲ್ಲ ಎನ್ನುವುದು ಗೊತ್ತಾಗಿದೆ ಎಂದ ಅವರು, ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ ಎಂದು ಸಿಟಿ ರವಿ ಹೇಳಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಮುಸ್ಲಿಂ ಸಮಾಜದ ನಾಯಕರು ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್‍ಗೆ-ರಿಯಾಕ್ಷನ್ ಆಗುತ್ತಾ ಹೋಗುತ್ತದೆ ಎಂದ ಅವರು, ನುಗ್ಗಿಕೇರಿ ಖಾಸಗಿ ದೇವಸ್ಥಾನವಾಗಿದೆ. ಅಲ್ಲಿ ಯಾರ ಅಂಗಡಿ ಇರಬೇಕು ಎನ್ನುವುದು ಆಡಳಿತ ಮಂಡಳಿಗೆ ಬಿಟ್ಟ ವಿಷಯವಾಗಿದೆ. ಅದು ಹಿಂದೂ ದೇವಸ್ಥಾನ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ
ಒಂದು ಕಡೆ ಕಾನೂನು ವಿರೋಧಿಸುತ್ತಾರೆ. ಮತ್ತೊಂದೆಡೆ ನಮ್ಮ ದೇವಸ್ಥಾನಕ್ಕೆ ವ್ಯಾಪಾರಕ್ಕೆ ಬರುತ್ತಾರೆ. ಸಮಾಜದಲ್ಲಿ ಈಗ ಎರಡೂ ಕಡೆ ವಿಚಾರ ಮಾಡಬೇಕಿದೆ ಎಂದ ಅವರು, ಒಂದೇ ಕಡೆಯಿಂದ ಚಪ್ಪಾಳೆ ಆಗೋದಿಲ್ಲ, ಎರಡು ಕೈ ಸೇರಿಸಿಯೇ ಚಪ್ಪಾಳೆ ಆಗಬೇಕು, ಹಾಗಂತ ನಾನು ಗಲಾಟೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದರು.
ಮುಸ್ಲಿಂ ಸಮಾಜದ ನಾಯಕರು ತಪ್ಪು ಆದಾಗ ತಪ್ಪು ಎಂದು ಹೇಳಬೇಕಿದೆ, ಹುಚ್ಚು ಹುಡುಗರು ಹೋಗಿ ದೇವಸ್ಥಾನದಲ್ಲಿ ಹಾಗೆ ಮಾಡಿದ್ದಾರೆ. ಅದಕ್ಕೆ ಪ್ರಚೋದನೆ ಆಗಿದ್ದೇನು ಅದನ್ನು ನೋಡಬೇಕು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ