ಒಂದು ವಾರದ ಯುದ್ಧವಲ್ಲ, ವಿವಿಧ ರೂಪಗಳಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕಿದೆ: ಅರುಣ್ ಜೇಟ್ಲಿ

Public TV
2 Min Read
Arun Jaitley

ನವದೆಹಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಕಾರಣವಾದ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಯುದ್ಧವನ್ನು ಗೆಲ್ಲಲು ರಾಜತಾಂತ್ರಿಕ ಅಥವಾ ಇತರ ಕ್ರಮಗಳನ್ನು ಭಾರತವು ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೇಳಿದ್ದಾರೆ.

ದೆಹಲಿಯ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ರಾಕ್ಷಸ ರಾಜ್ಯ. ಪುಲ್ವಾಮಾ ದಾಳಿಗೆ ಕಾರಣವಾದ ಉಗ್ರರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಆದರೆ ಉಗ್ರರು ತಾವೇ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪಾಕಿಸ್ತಾನ ಸರ್ಕಾರದ ಮೊಂಡ ವಾದದ ವಿರುದ್ಧ ಗುಡುಗಿದರು.

Pulwama terror attack kashmir

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನು ಪ್ರಸ್ತಾಪಿಸಿದ ಜೇಟ್ಲಿ, ದಾಳಿಗೆ ಸಂಬಂಧಿಸಿದ ಸೂಕ್ತ ಗುಪ್ತಚರ ಮಾಹಿತಿಯನ್ನು ನೀಡುವಂತೆ ಅಲ್ಲಿನ ಸರ್ಕಾರದ ಮುಖ್ಯಸ್ಥರು ಹೇಳುತ್ತಿದ್ದಾರೆ. ಈ ರೀತಿ ಕೇಳುತ್ತಿರುವುದು ದೊಡ್ಡ ಅಪರಾಧ. ದಾಳಿಯ ಹೊಣೆ ಹೊತ್ತ ವ್ಯಕ್ತಿ ನಿಮ್ಮ ದೇಶದವನೇ ಆಗಿದ್ದಾನೆ. ನಿಮ್ಮ ನೆಲದಲ್ಲಿ ಇದ್ದುಕೊಂಡು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದರು.

ದಾಳಿಯ ವಿಚಾರವಾಗಿ ಪಾಕಿಸ್ತಾನವು ಹುಲಿಯ ಮೇಲೆ ಸವಾರಿ ಮಾಡುತ್ತಿದೆ. ಆದರೆ ಸವಾರಿ ಮಾಡುವವರನ್ನು ಎಂದಿಗೂ ಹುಲಿ ಉಳಿಸಿಕೊಳ್ಳುವುದಿಲ್ಲ. ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

modi imran khan

ನಮ್ಮ ಜೀವಿತಾವಧಿಯಲ್ಲಿ ನಾವು ಯುದ್ಧ, ಮಾನವ ದುರಂತಗಳನ್ನು ನೋಡಿದ್ದೇವೆ. ಭಯೋತ್ಪಾದಕರು ಹತ್ಯೆಗೈದಿದ್ದ ಪ್ರಧಾನ ಮಂತ್ರಿಗಳನ್ನು ನಾವು ನೋಡಿದ್ದೇವೆ. ಆದರೆ ಹಿಂದಿನ ಸಂದರ್ಭಗಳಿಗಿಂತ ಈ ಬಾರಿಯ ಕೋಪವು ತೀವ್ರವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಗೆ ಪ್ರತ್ಯುತ್ತರ ನೀಡಲು ಎಲ್ಲ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಈ ಯುದ್ಧವು ನಮಗೆ ನಿರ್ಣಾಯಕವಾಗಿದ್ದು, ಜಯ ಸಾಧಿಸಲು ಸಿದ್ಧರಾಗಬೇಕು. ನಮ್ಮ ನೆರೆಯ ರಾಕ್ಷಸ ಪಾಕಿಸ್ತಾನವು ತನ್ನ ಸಾಂಪ್ರದಾಯಿಕ ಪ್ರವೃತ್ತಿಯನ್ನು ಮುಂದುವರಿಸುತ್ತಿದೆ. ಇದು ಕೇವಲ ಒಂದು ವಾರದ ಯುದ್ಧವಲ್ಲ. ವಿವಿಧ ರೂಪಗಳಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದರು.

ARUN JAITLEY 2

ಪಾಕಿಸ್ತಾನದೊಂದಿಗೆ ಭಾರತ ಕ್ರಿಕೆಟ್ ಪಂದ್ಯಗಳನ್ನು ಆಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೇಶವು ಅವರೊಂದಿಗೆ ಸೌಹಾರ್ದ ಅಥವಾ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುವಂತಿಲ್ಲ. ಇದು ದೇಶದ ಜನರ ಭಾವನೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *