ಬೆಂಗಳೂರು: ಪಶ್ಚಿಮ ಬಂಗಾಳ (West Bengal) ಮತ್ತು ಅಸ್ಸಾಂ (Assam) ವಿಧಾನಸಭಾ ಚುನಾವಣೆಗಳಲ್ಲಿ ಅಮೋಘ ಜಯ ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಬೆಂಗಳೂರಿಗೆ (Bengaluru) ಭೇಟಿ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿಗಳಿಗೆ ಅದ್ಧೂರಿ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ ಹೆಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರು ಅಧಿಕೃತವಾಗಿ ಸ್ವಾಗತಿಸಲಿದ್ದಾರೆ. ಶಿಷ್ಟಾಚಾರದಂತೆ ವಿಮಾನ ನಿಲ್ದಾಣದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಧಾನಿಗಳಿಗೆ ಬರಮಾಡಿಕೊಳ್ಳಲಿದ್ದಾರೆ.
ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ದಾಖಲಿಸಿದ ಗೆಲುವಿನ ಹಿನ್ನೆಲೆಯಲ್ಲಿ, ಹೆಚ್‌ಎಎಲ್ ವಿಮಾನ ನಿಲ್ದಾಣದ (HAL Airport) ಹೊರಗಿನ ಆವರಣದಲ್ಲಿ ಪ್ರಧಾನಿಗಳಿಗೆ ವಿಶೇಷ ಸನ್ಮಾನ ನಡೆಯಲಿದೆ. ಬೆಳಿಗ್ಗೆ 9:15 ರಿಂದ 10:15 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಧ್ಯಾನ ಮಂದಿರ ಉದ್ಘಾಟನೆ
ರಾಜಕೀಯ ಕಾರ್ಯಕ್ರಮದ ಬಳಿಕ ಪ್ರಧಾನಿಯವರು ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳಲಿರುವ ಅವರು ಅಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಅಷ್ಟೇ ಅಲ್ಲದೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆ ಸಂಭ್ರಮದಲ್ಲೂ ಭಾಗಿಯಾಗಲಿದ್ದಾರೆ.
ಎಷ್ಟು ಗಂಟೆಗೆ ಏನು ಕಾರ್ಯಕ್ರಮ?
09:35 – ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
09:45 – ಅಭಿನಂದನಾ ಕಾರ್ಯಕ್ರಮದ ವೇದಿಕೆಗೆ ಆಗಮನ
09:45-10.15 – ಅಭಿನಂದನಾ ಸಮಾರಂಭ ಮತ್ತು ಭಾಷಣ
10:30 – ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ಪ್ರಯಾಣ
10:50 – ಸೋಂಪುರ ಹೆಲಿಪ್ಯಾಡ್ ತಲುಪಲಿರುವ ಪ್ರಧಾನಿ
11 ರಿಂದ 12.30 – ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗಿ
01:05 – ಆಶ್ರಮದಿಂದ ಹೆಚ್‌ಎಎಲ್ ಕಡೆಗೆ ನಿರ್ಗಮನ
01.40ಕ್ಕೆ – ಹೆಚ್‌ಎಎಲ್‌ನಿಂದ ಹೈದರಾಬಾದ್‌ಗೆ ಪಯಣ
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಶೇಷವಾಗಿ ಹೆಚ್‌ಎಎಲ್ ಮತ್ತು ಕನಕಪುರ ರಸ್ತೆ ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಕಾರ್ಯಕ್ರಮ ನಡೆಯುವ ಎಚ್ಎಎಲ್ ಗೇಟ್ ನಂ. 30ರ ಸುತ್ತಮುತ್ತ ಭಾನುವಾರ ಬೆಳಿಗ್ಗೆ 5ರಿಂದ ಮಧ್ಯಾಹ್ನ 3ರ ವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ನೈಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

