ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಆರ್ಯ ವಿರುದ್ಧ ತಿರುನೆಲ್ವೆಲಿಯಲ್ಲಿರುವ ಅಂಬಸಮುದ್ರಂ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.
ಆರ್ಯ 2011ರಲ್ಲಿ ನಟಿಸಿದ ‘ಅವನ್ ಇವನ್’ ಚಿತ್ರ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿತ್ತು. ಅವನ್ ಇವನ್ ಚಿತ್ರದಲ್ಲಿ ನಟ ಆರ್ಯ ಹಾಗೂ ನಟ ವಿಶಾಲ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.
ಬಾಲ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಸಿಂಗಮತ್ತಿ ಜಮೀನ್ ಅವರ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ಆರ್ಯ ಹಾಗೂ ನಿರ್ದೇಶಕ ಬಾಲ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.
ಈ ಮೊಕದ್ದಮೆಗೆ ಸಂಬಂಧಿಸಿದಂತೆ ತಿರುನೆಲ್ವೆಲಿಯ ಅಂಬಸಮುದ್ರಂ ಕೋರ್ಟ್ ವಿಚಾರಣೆ ಹಾಜರಾಗುವಂತೆ ಆರ್ಯ ಮತ್ತು ಬಾಲಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದರೂ ಇವರಿಬ್ಬರು ವಿಚಾರಣೆಗೆ ಗೈರಾಗಿದ್ದರು.
ಸಾಕಷ್ಟು ಬಾರಿ ವಿಚಾರಣೆ ಗೈರು ಹಾಜರಿ ಹಾಕಿದ್ದಕ್ಕೆ ಕೋರ್ಟ್ ಇವರಿಬ್ಬರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಜುಲೈ 13 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಯಲಿದೆ.