– ಮೋದಿ ಅವರನ್ನೂ ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ಟೆಲಿಗ್ರಾಂ ನಲ್ಲಿ ಚರ್ಚೆ
– ಶ್ರೀಮಂತರನ್ನ ಕಿಡ್ನ್ಯಾಪ್ ಮಾಡಿ ಭಯೋತ್ಪಾದನೆಗೆ ಹಣ ಹೊಂದಿಸೋಕೆ ಸ್ಕೆಚ್
ಚಿಕ್ಕಬಳ್ಳಾಪುರ: ದೇಶದಲ್ಲಿ ವಿಧ್ವಂಸಕ ಭಯೋತ್ಪಾದನಾ (Terrorism) ಕೃತ್ಯ ಎಸಗಲು ಭಾರೀ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapura City Police) ಯುವಕನೊಬ್ಬನನ್ನ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರದ ನಿವಾಸಿ ಶಬ್ಬೀರ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶಬ್ಬೀರ್ ಟೆಲಿಗ್ರಾಂ (Telegram) ಆ್ಯಪ್ನಲ್ಲಿ ಗ್ರೂಪ್ವೊಂದನ್ನ ರಚಿಸಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಕುರಿತು ಚರ್ಚೆ ನಡೆಸುತ್ತಿದ್ದ. ಗ್ರೂಪ್ನಲ್ಲಿ ಪ್ರತಿದಿನವೂ ದಾಳಿ ಹಾಗೂ ಹಣ ಸಂಗ್ರಹಿಸುವ ಕುರಿತಂತೆ ಯೋಜನೆ ರೂಪಿಸಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಯೋತ್ಪಾದನಾ ಕೃತ್ಯಕ್ಕೆ ಹಣ ಹೊಂದಿಸುವ ಪ್ಲ್ಯಾನ್ ಹೇಗೆ?
ಸದ್ಯ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಹೊಂದಿಸಬೇಕು. ಹಣ ಮಾಡಿದ ನಂತರ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಿ, ಅರಾಜಕತೆ ಸೃಷ್ಟಿ ಮಾಡಬೇಕು ಅಂತಲೂ ಚರ್ಚೆ ನಡೆದಿತ್ತು ಎಂಬುದೂ ಗೊತ್ತಾಗಿದೆ.

ಇದಲ್ಲದೆ, ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಟೆಲಿಗ್ರಾಂ ಗ್ರೂಪ್ನಲ್ಲಿ ಚರ್ಚೆ ನಡೆದಿತ್ತು. ದೇಶದ ವಿವಿಧ ಭಾಗಗಳಲ್ಲಿನ ಹಲವು ಮಂದಿ ಈ ಗ್ರೂಪ್ನ ಸದಸ್ಯರಾಗಿದ್ದರು. ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಬಂಧಿತ ಶಬ್ಬೀರ್ನ ವಿಚಾರಣೆ ನಡೆಸುತ್ತಿದ್ದಾರೆ. ಟೆಲಿಗ್ರಾಂ ಗ್ರೂಪ್ನಲ್ಲಿನ ಚರ್ಚೆಗಳು, ಸದಸ್ಯರ ಸಂಪರ್ಕ ಹಾಗೂ ಸಂಚಿನ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

