ಲಕ್ನೋ: ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ (Travelling Ticket Examiner) ತಳ್ಳಿದ ಹಿನ್ನೆಲೆ ಸೇನಾ ಸಿಬ್ಬಂದಿಯೊಬ್ಬರು ಕಾಲನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗಾಯಗೊಂಡವರನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‍ನಿಂದ (Dibrugarh-New Delhi Rajdhani Express) ಬರೇಲಿ ಜಂಕ್ಷನ್ (Bareilly Junction) ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಸಂಖ್ಯೆ 2 ರಲ್ಲಿ ವ್ಯಕ್ತಿಯನ್ನು ತಳ್ಳಲಾಗಿದೆ.
ಇದೀಗ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಸುಪಾನ್ ಬೋರೆ ವಿರುದ್ಧ ಕೊಲೆ ಯತ್ನದ ಆರೋಪವನ್ನು ಹೊರಿಸಲಾಗಿದ್ದು, ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ನಾವು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮೊರಾದಾಬಾದ್ ವಿಭಾಗದ ಹಿರಿಯ ಹಣಕಾಸು ವ್ಯವಸ್ಥಾಪಕ ಸುಧೀರ್ ಸಿಂಗ್ ಹೇಳಿದ್ದಾರೆ.
ಸುಪಾನ್ ಬೋರೆ ಮತ್ತು ಸೋನು ನಡುವೆ ಟಿಕೆಟ್ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಸುಪಾನ್ ಬೋರೆ, ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ್ದರಿಂದ ರೈಲಿನ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಟಿಟಿಇ ಬೋರೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆತ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಅಜಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಘಟನೆಯ ನಂತರ ಕೆಲವು ಸಹ ಪ್ರಯಾಣಿಕರು ಟಿಟಿಇಯನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.