ಚಂಡೀಗಢ: ಭಾರತದ ಸೇನೆಯ ಯೋಧರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಗಢದ ನರ್ನಾರ್ ನಗರದಲ್ಲಿ ನಡೆದಿದೆ. ಸುಮಾರು 2 ವರ್ಷಗಳಿಂದ ಫೇಸ್‍ಬುಕ್ ಮೂಲಕ ಪರಿಚಯವಾದ ವಿದೇಶಿ ಮಹಿಳೆಯೊಂದಿಗೆ ಸೈನ್ಯದ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಆರೋಪದ ಮೇಲೆ ಮೇಲೆ ಯೋಧನ ಬಂಧನವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣದ ಮಹೇಂದರ್‍ಗಢ್ ಜಿಲ್ಲೆಯ ಬಸ್ಸೈ ಗ್ರಾಮದ ರವೀಂದರ್ ಕುಮಾರ್ ಯಾದವ್ (21) ಬಂಧಿತ ಯೋಧ. ಬಂಧನದ ವೇಳೆ ಆತನಿಂದ 7 ಲೈವ್ ಕಾರ್ಟ್ರಿಡ್ಜ್ ಗಳು, 2 ಮೊಬೈಲ್ ಫೋನ್ ಮತ್ತು ಮೂರು ಸಿಮ್ ಕಾರ್ಡ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಬಂಧಿತ ಯೋಧ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಐದು ದಿನಗಳ ರಜೆಯನ್ನು ಮುಗಿಸಿ ಮನೆಯಿಂದ ಜುಲೈ 10ರಂದು ಹಿಂದಿರುಗುತ್ತಿದ್ದ ವೇಳೆ ಬಂಧಿಸಲಾಗಿದೆ. ಸ್ಥಳೀಯ ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಡಾಬಾದಿಂದ ಟೀ ಕುಡಿದು ಆತ ಹೊರ ಬರುವಾಗ ನರ್ನಾಲ್ ಪೊಲೀಸರು ಆತನ್ನು ಬಂಧಿಸಿದ್ದಾರೆ. ಬಳಿಕ ಯೋಧನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಲಾಗಿದ್ದು, ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ನರ್ನಾಲ್ ಪೊಲೀಸ್ ಅಧಿಕಾರಿ ಚಂದರ್ ಮೋಹನ್ ಹೇಳಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಸೆಕ್ಷನ್ 4, 5, 9 ಮತ್ತು ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement
ಫೇಸ್‍ಬುಕ್ ಪರಿಚಯ: 2017 ಮಾರ್ಚ್‍ನಲ್ಲಿ ಯಾದವ್ ಅವರನ್ನು ಸೇನೆಯ 5 ಕುಮಾವುನ್ ರೆಜಿಮೆಂಟ್‍ನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಆ ಬಳಿಕ 2018 ರಲ್ಲಿ ಅಮೃತಸರದಲ್ಲಿ ಪೋಸ್ಟ್ ನೀಡಲಾಗಿತ್ತು. ಈ ವೇಳೆ ಆತ ವಿದೇಶಿ ಮಹಿಳೆಯೊಂದಿಗೆ ಸಂಪರ್ಕವನ್ನು ಆರಂಭಿಸಿದ್ದು ತಿಳಿದು ಬಂದಿದೆ. ಮೊದಲು ಫೇಸ್ ಬುಕ್‍ನಲ್ಲಿ ಚಾಟ್ ಮೂಲಕ ಮಹಿಳೆ ಪರಿಚಯವಾಗಿತ್ತು. ಈ ಸಂದರ್ಭದಲ್ಲಿ ಆತ ಮಹಿಳೆಗೆ ತಾನು ಯೋಧ ಎಂದು ತಿಳಿಸಿದ್ದ. ಆ ಬಳಿಕ ಮಹಿಳೆ ಯೋಧನಿಗೆ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಳು.
Advertisement
ಪಾಕ್ ಕೈವಾಡ: ಈ ಸಂದರ್ಭದಲ್ಲಿ ಆತ ಸೇನಾ ಘಟಕ ಮತ್ತು ಶಸ್ತ್ರಾಸ್ತ್ರಗಳ ಸ್ಥಳ ಫೋಟೋ ಹಾಗೂ ಮಾಹಿತಿಯನ್ನು ಮಹಿಳೆಯೊಂದಿಗೆ ಹಂಚಿಕೊಂಡಿದ್ದ. ಅಲ್ಲದೇ ತನ್ನ ವರ್ಗಾವಣೆಯ ಬಗ್ಗೆಯೂ ಮಾಹಿತಿ ನೀಡಿದ್ದ. ವಿದೇಶಿ ಮಹಿಳೆ ಯೋಧನ ಖಾತಗೆ ಸುಮಾರು 5,000 ರೂ.ಗಳನ್ನು ಡೆಪಾಸಿಟ್ ಮಾಡಿದ್ದಳು. ಈ ಮಾಹಿತಿ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ತಿಳಿದು ಬಂದಿತ್ತು. ಮಾಹಿತಿ ಪಡೆದ ಪೊಲೀಸರು ಯೋಧನನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾರೆ.
ಅಂದಹಾಗೇ ಯೋಧ ಯಾದವ್ ಮೂರು ವಾಟ್ಸಾಪ್ ಸಂಖ್ಯೆಗಳನ್ನು ಬಳಸುತ್ತಿದ್ದ. ಮಹಿಳೆಯೂ ಕೂಡ ಆತನಿಗೆ ನೇರ ಕರೆ ಮಾಡದೇ ಕೇವಲ ವಾಟ್ಸಾಪ್ ಕಾಲ್ ಮಾತ್ರ ಮಾಡುತ್ತಿದ್ದಳು. ಸದ್ಯ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆ ಪಾಕಿಸ್ತಾನಕ್ಕೆ ಸೇರಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಫೇಸ್‍ಬುಕ್ ದಾಖಲೆಯ ಪ್ರಕಾರ ಆಕೆ ತನ್ನನ್ನು ಕ್ಯಾಪ್ಟನ್ ಅನಿಕಾ ಎಂದು ಪರಿಚಯಿಸಿಕೊಂಡಿದ್ದಳು.