ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ತನಿಖೆಯಿಂದ ಹೆಸರು ಕೈಬಿಡುವಂತೆ ಕೋರಿದ್ದ ಅರ್ಜಿಯನ್ನು ಸಂಸದರು, ಶಾಸಕರ ವಿರುದ್ಧ ಪ್ರಕರಣಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.
ಸಿಎಂ ಕುಮಾರಸ್ವಾಮಿ, ಭೂಮಾಲೀಕರಾದ ಶ್ರೀರಾಮ್, ರವಿ ಪ್ರಕಾಶ್ ಹಾಗೂ ರಾಮಲಿಂಗಂ ಅವರನ್ನು ನ್ಯಾಯಾಧೀಶ ಬಿ.ವಿ.ಪಾಟೀಲ್ ತನಿಖೆಯಿಂದ ಮುಕ್ತ ಮಾಡಿದ್ದಾರೆ. ಮಾಜಿ ಸಚಿವ ಚೆನ್ನಿಗಪ್ಪ ತನಿಖೆಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರಲಿಲ್ಲ, ಹೀಗಾಗಿ ಚೆನ್ನಿಗಪ್ಪ ವಿರುದ್ಧ ಮಾತ್ರ ಇದೀಗ ಪ್ರಕರಣ ಉಳಿದುಕೊಂಡಿದೆ.
Advertisement
ಡಿನೋಟಿಫಿಕೇಷನ್ ಆದ 4 ವರ್ಷದ ಬಳಿಕ ದೂರು ದಾಖಲಾಗಿದೆ. ಉದ್ದೇಶ ಪೂರ್ವಕವಾಗಿ ಅಥವಾ ಲಾಭದಾಯಕವಾಗಿ ಡಿನೋಟಿಫಿಕೇಷನ್ ಮಾಡಿರೋದಕ್ಕೆ ಪೂರಕ ಸಾಕ್ಷ್ಯಾಧಾರಗಳು ಇಲ್ಲ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ದೂರು ದಾಖಲು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
Advertisement
Advertisement
ವಿಶೇಷ ನ್ಯಾಯಾಲಯ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಪ್ರಕರಣದ ತೀರ್ಪನ್ನು ಆಗಸ್ಟ್ 27ಕ್ಕೆ ಕಾಯ್ದಿರಿಸಿತ್ತು.
Advertisement
ಏನಿದು ಪ್ರಕರಣ?
ಅರ್ಕಾವತಿ ಬಡಾವಣೆ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 3.8ಎಕರೆಯನ್ನು 2007ರಲ್ಲಿ ಡಿನೋಟಿಫೈ ಮಾಡಿದ ಆರೋಪ ಕುಮಾರಸ್ವಾಮಿ ಅವರ ಮೇಲಿತ್ತು. ಅಂದಿನ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಚೆನ್ನಿಗಪ್ಪ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದರು. ಜಮೀನಿನ ಮಾಲೀಕ ಎವಿ ರವಿಪ್ರಕಾಶ್ ಹಾಗೂ ಎವಿ ಶ್ರೀರಾಮ್ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಕ್ರಮವಾಗಿ ಡಿನೋಟಿಫೈ ಮಾಡಿಕೊಡಲಾಗಿದೆ ಎಂದು ಚಾಮರಾಜನಗರದ ಮಹದೇವಸ್ವಾಮಿ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರ ಮನವಿ ವಜಾ ಆಗಿತ್ತು. ತನಿಖೆ ನಡೆಯುತ್ತಿರುವಾಗಲೇ ಪ್ರಕರಣವನ್ನು ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಈ ಪ್ರಕರಣದ ತನಿಖೆಯಿಂದ ತನ್ನನ್ನು ಕೈಬಿಡುವಂತೆ ಕೋರ್ಟ್ ಗೆ ಕುಮಾರಸ್ವಾಮಿ ಜೊತೆ ರವಿಪ್ರಕಾಶ್, ಜ್ಯೋತಿ ರಾಮಲಿಂಗಂ ಮತ್ತು ಶ್ರೀರಾಮ್ ಕೂಡ ಅರ್ಜಿ ಸಲ್ಲಿದ್ದರು. ಆದರೆ ಮಾಜಿ ಸಚಿವ ಚೆನ್ನಿಗಪ್ಪ ಆರೋಪದಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv