– ಪೊಲೀಸರ ಮೇಲೆ ನಿಖಿಲ್ ಗರಂ
ರಾಮನಗರ: ಜೆಡಿಎಸ್‍ಗೆ ಅಧಿಕಾರ ತಪ್ಪಿಸಲು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ವತಿಯಿಂದ ರಾಮನಗರದಲ್ಲಿ (Ramanagara) ಪ್ರತಿಭಟನೆ ನಡೆದಿದೆ. ಈ ವೇಳೆ ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರನ್ನು (Nikhil Kumaraswamy) ಪೊಲೀಸರು ಎಳೆದಾಡಿದ್ದು, ಪೊಲೀಸರ ವಿರುದ್ಧ ನಿಖಿಲ್ ಗರಂ ಆಗಿದ್ದಾರೆ.
ರಾಮನಗರ ತಾಲೂಕಿನ ಹಳ್ಳಿಮಾಳ ವ್ಯವಸಾಯೋತ್ಪನ್ನ ಮಾರುಕಟ್ಟೆ ಚುನಾವಣೆಯನ್ನು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಂದೂಡಿಕೆ ಮಾಡಿದ್ದಾರೆ. ಎರಡು ಬಾರಿ ಚುನಾವಣೆ ನಿಗಧಿಯಾಗಿದ್ರೂ ಅಧಿಕಾರಿಗಳು ಚುನಾವಣೆ ನಡೆಸಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದೆ. ಈ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಸಹಕಾರ ಸಂಘಗಳ ನಿಬಂಧಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕಂದಾಯ ಭವನಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಬಳಿಕ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಬೀಗ ಜಡಿಯಲು ಯತ್ನಿಸಿದ್ದಾರೆ. ಅಲ್ಲದೇ ಕಂದಾಯ ಭವನದ ಗ್ಲಾಸ್ ಪುಡಿಪುಡಿ ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ತಡೆದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ.