ಉಡುಪಿ: ಕರ್ನಾಟಕ ಕರಾವಳಿಗೆ ಅರಬ್ಬೀ ಸಮುದ್ರದ ಆತಂಕ ಹೆಚ್ಚಾಗಿದ್ದು, ಭೂಭಾಗವನ್ನು ಕಬಳಿಸುತ್ತಾ ಬರುತ್ತಿದೆ ಸಮುದ್ರದ ನೀರು. ಸಮುದ್ರದ ತಾಪ ಕಡಿಮೆ ಮಾಡಲು ವಿಷ್ಣುವಿನ ಆರಾಧನೆಗೆ ವೇದಿಕೆ ಸಜ್ಜಾಗಿದೆ.
ಜನವರಿ 26ರ ಸಂಜೆ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಂಪು ಗುಂಪಾಗಿ ವಿಷ್ಣು ಸಹಸ್ರನಾಮ ಪಠಣ ಮಾಡುವ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಲಾಗಿದ್ದು, ಕಡಲ ತೀರದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ವಿಷ್ಣು ಸಹಸ್ರನಾಮವನ್ನು ತಾಪಃಹಾರ ಎಂದು ಕರೆಯಲಾಗುತ್ತದೆ. ದೇಹದ ತಾಪ ಎಂದರೆ, ಜ್ವರ ಹೆಚ್ಚಾದಾಗ ವಿಷ್ಣು ಸಹಸ್ರನಾಮ ಆ ತಾಪಕ್ಕೆ ಆಹಾರ. ಸಾಮೂಹಿಕ ವಿಷ್ಣು ಸಹಸ್ರನಾಮ ಹೇಳಿದರೆ ತಪಸ್ ಶಕ್ತಿಯಿಂದ ಮಂತ್ರಶಕ್ತಿಯಿಂದ ಕಡಲಿನ ಅಬ್ಬರವು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ವೇದ ಕೃಷಿಕ ಕೆ.ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ ತೀರದಲ್ಲಿ ನಡೆಯಲಿದೆ. ಮರವಂತೆ ಕಡಲ ಕಿನಾರೆಯಲ್ಲಿ ಈ ಪ್ರಯೋಗ ಈ ಹಿಂದೆ ಯಶಸ್ವಿಯಾಗಿದೆಯಂತೆ.
ಏಕಕಾಲದಲ್ಲಿ 108 ಜನರ ಗುಂಪಿನಿಂದ 108 ಸ್ಥಳಗಳಲ್ಲಿ ವಿಷ್ಣು ಸಹಸ್ರನಾಮ ಕೇಳಿಬರಲಿದೆ. ಎಲ್ಲಾ ಗುಂಪುಗಳು ಆರು ಬಾರಿ ಮಂತ್ರ ಹೇಳಿದರೆ, ಮಹಾಭಿಯಾನದಲ್ಲಿ ಸುಮಾರು 18 ಸಾವಿರ ಮಂದಿ ಭಾಗವಹಿಸುತ್ತಾರೆ. 72 ಸಾವಿರ ಅಕ್ಷರ ಇರುವ ವಿಷ್ಣುಸಹಸ್ರನಾಮದಿಂದ ಶಕ್ತಿ ನಿರ್ಮಾಣವಾಗಲಿದೆ. ಕಡಲ ಕೊರೆತ ತಡೆಯಲು, ಹೊಸ ತಂತ್ರಜ್ಞಾನ, ಸಮುದ್ರಕ್ಕೆ ತಡೆಗೋಡೆ ಹೀಗೆ ಈಗಾಗಲೇ ಸರ್ಕಾರಗಳು ನೂರಾರು ಕೋಟಿ ಸುರಿದಾಗಿದೆ. ಇದೀಗ ರೂಪಾಯಿ ಖರ್ಚಿಲ್ಲದ ಸಮುದ್ರನ ಅಬ್ಬರ ತಂಪಾಗಿಸುವ ಪ್ರಯತ್ನಕ್ಕೆ ಆಸ್ತಿಕ ಸಮಾಜ ಮುಂದಾಗಿದೆ.