ಇಂದು ಪುನೀತ್ ಪರ್ವ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ (Samadhi) ಬಳಿ ಅಭಿಮಾನಿಗಳ ದಂಡು ನೆರೆದಿದೆ. ಪುನೀತ್ ಪರ್ವಕ್ಕಾಗಿ ದೂರದ ಜಿಲ್ಲೆಗಳಿಂದ ಬಂದ ಅಭಿಮಾನಿಗಳು (Fans) ಮೊದಲು ಪುನೀತ್ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಕಂಠೀರವ ಸ್ಟೂಡಿಯೋ(Kantheerava Studio) ಸುತ್ತಲೂ ಅಭಿಮಾನಿಗಳು ತಂಡೋಪತಂಡವಾಗಿ ಸೇರಿದ್ದು, ಅಪ್ಪು ಸಮಾಧಿಯ ದರ್ಶನಕ್ಕೆ ಕಾಯುತ್ತಿದ್ದಾರೆ.
ಈ ಕುರಿತು ಅಭಿಮಾನಿಗಳು ಮಾತನಾಡಿ, ‘ಅಪ್ಪು ದರ್ಶನ ಪಡೆದು ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀವಿ. ನಮ್ಮ ದೇವರು ನಮ್ಮನ್ನ ಬಿಟ್ಟು ಹೋಗಿಲ್ಲ. ಅಪ್ಪು ನಮ್ಮ ಜೊತೆಯಲ್ಲೇ ಇದ್ದಾರೆ. ಅಪ್ಪು ಸಮಾಧಿಗೆ ಹೂವಿನ ಅಲಂಕಾರ ನಡೆಯುತ್ತಿದೆಯಂತೆ. ಅಲಂಕಾರ ಮುಗಿದ ಮೇಲೆ ದರ್ಶನಕ್ಕೆ ಬಿಡುವುದಾಗಿ ಹೇಳಿದ್ದಾರೆ. ಕಾಯುತ್ತಿದ್ದೇವೆ’ ಅಂತಾರೆ. ಬಳ್ಳಾರಿ, ಹೊಸಪೇಟೆ, ರಾಣೆಬೆನ್ನೂರು, ಹಾವೇರಿ ಸೇರಿ ಹಲವು ಕಡೆಯಿಂದ ಅಭಿಮಾನಿಗಳು ಇಲ್ಲಿಗೆ ಬಂದಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ (Puneeth Rajkumar) ನೆನಪಿನಲ್ಲಿ ‘ಪುನೀತ್ ಪರ್ವ’ (Puneeth Parva) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.
ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಮಾತ್ರವಲ್ಲ, 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿರುವುದರಿಂದ ಪೊಲೀಸ್ ಬಂದೋಬಸ್ತ್ ಕೂಡ ಮಾಡಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ಬೆಂಗಳೂರು ಪೊಲೀಸರು ಭಾರೀ ಸಿದ್ದತೆಯನ್ನೇ ಮಾಡಿಕೊಂಡಿದ್ದಾರೆ.