ರಾಮನಗರ: ಬಿಜೆಪಿಯವರಿಂದ ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ರಾಮನಗರ ಶಾಸಕಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ರಾಮನಗರದ ವಿವಿಧೆಡೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
Advertisement
Advertisement
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಹೆಸರನ್ನು ತಳಕು ಹಾಕುತ್ತಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದೀಗ ಸಿಬಿಐಗೆ ತನಿಖೆ ವಹಿಸಿರುವುದರಿಂದ ಪಾರದರ್ಶಕವಾಗಿ ತನಿಖೆ ನಡೆಯಲಿ ಎಂದು ತಿಳಿಸಿದರು.
Advertisement
ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದಕ್ಕೆಲ್ಲ ಅವರು ಹೆದರುವವರೂ ಅಲ್ಲ, ಹೆದರುವ ಅಗತ್ಯವೂ ಇಲ್ಲ. ಹೋರಾಟದ ಮೂಲಕವೇ ಅವರು ರಾಜಕಾರಣಕ್ಕೆ ಬಂದಿರುವುದು. ಬಿಜೆಪಿಯವರು ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
Advertisement
ಕುಮಾರಸ್ವಾಮಿಯವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿ ಪ್ರಯತ್ನ ಮಾಡುತ್ತಿದ್ದು, ಅವರ ಕೆಲಸ ಎಂದಿಗೂ ಸಫಲವಾಗುವುದಿಲ್ಲ. ನೆರೆ ಪ್ರವಾಹವನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನ ತೊಂದರೆಯಲ್ಲಿದ್ದು, 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಿಎಂ ಹೇಳುತ್ತಿಲ್ಲ. ಪ್ರಧಾನಿ ಮೋದಿಯವರೇ ಪರಿಹಾರದ ಕುರಿತು ಹೇಳಬಹುದಿತ್ತು. ಕೇಂದ್ರ ಸರ್ಕಾರ ನೆರೆ ಪರಿಹಾರದ ಘೋಷಣೆ ಕುರಿತು ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಬಗ್ಗೆ ಬೇಜವಬ್ದಾರಿತನ ತೋರುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.