ಕಾವಾಡಿಗನನ್ನೇ ತುಳಿದ ಸಾಕಾನೆ ಸುಗ್ರೀವ – ಗಂಭೀರ ಗಾಯ

1 Min Read

ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ (Dubare Elephant Camp) ಬಂದಿದ್ದ ಸುಗ್ರೀವ (Sugreeva) ಸಾಕಾನೆ ಇಂದು ಬೆಳಿಗ್ಗೆ ಆಹಾರ ನೀಡುತ್ತಿದ್ದ ಕಾವಾಡಿಗನ (Mahout) ಮೇಲೆ ದಾಳಿ ಮಾಡಿ ದಂತದಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹಾಸನ (Hassan) ಜಿಲ್ಲೆ, ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಕ್ಯಾಂಪ್‌ನಲ್ಲಿ ನಡೆದಿದೆ.

ರಾಜು ಗಂಭೀರವಾಗಿ ಗಾಯಗೊಂಡ ಕಾವಾಡಿಗ. ಬುಧವಾರ ಆರು ಸಾಕಾನೆಗಳು ಕಾಡಾನೆ ಸೆರೆ ಕಾರ್ಯಾಚರಣೆಗೆ ಆಗಮಿಸಿತ್ತು. ಸಂಜೆಯವರೆಗೂ ಕಾರ್ಯಾಚರಣೆ ನಡೆಸಿ ನರಹಂತಕ ಒಂಟಿಕೋರೆ ಕಾಡಾನೆಯನ್ನು ಸೆರೆ ಹಿಡಿದಿದ್ದು, ಸುಗ್ರೀವ ಮುಂದಾಳತ್ವ ವಹಿಸಿತ್ತು. ಆದರೆ ಸಂಜೆ ವೇಳೆಗೆ ಕಾಡಾನೆ ತಪ್ಪಿಸಿಕೊಂಡು ಹೋಗಿದ್ದು, ಇಂದು ಬೆಳಿಗ್ಗೆ ಅದೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಕಾವಾಡಿಗ ರಾಜು ಮೇಲೆ ಅಟ್ಯಾಕ್ ಮಾಡಿದೆ. ಸದ್ಯ ಹಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ರಾಜು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಡಿಸಿಎಫ್ ಸೌರಭ್‌ಕುಮಾರ್ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ತೋಟದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ – ಕೊಲೆಯೋ, ಅಸಹಜ ಸಾವೋ?

ಇನ್ನು ಕಾವಾಡಿಗ ರಾಜು ಮೇಲೆ ಕುಮ್ಕಿ ಆನೆಯಾದ ಸುಗ್ರೀವ ದಾಳಿ ಮಾಡಿ ದಂತದಿಂದ ತಿವಿದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಸಾಕಾನೆಗಳಾದ ಸುಗ್ರೀವ ಹಾಗೂ ಲಕ್ಷ್ಮಣ ದುಬಾರೆ ಕ್ಯಾಂಪ್‌ಗೆ ವಾಪಾಸ್ ಆಗಿವೆ. ಈ ಎರಡು ಸಾಕಾನೆಗಳ ಬದಲಿಗೆ ಬೇರೆ ಎರಡು ಕುಮ್ಕಿ ಆನೆಗಳು ಕಾರ್ಯಾಚರಣೆಗೆ ಆಗಮಿಸಲಿದ್ದು, ಇಂದು ನಡೆಯಬೇಕಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್‌ಗಳ ಪಾರ್ಕಿಂಗ್ ಸಮಸ್ಯೆಗೆ ಕೊನೆಗೂ ಮುಕ್ತಿ

Share This Article