ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಚರ್ಚೆಯಲ್ಲಿ ಭಾಗವಹಿಸಿದ ಮೋದಿ (Narendra Modi) ವಿರೋಧ ಪಕ್ಷಗಳಿಗೆ ಖಾಲಿ ಚೆಕ್ (Blank Cheque) ಆಫರ್ ನೀಡಿದ್ದಾರೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ‘ನಾರಿ ಶಕ್ತಿ ವಂದನ್ ಅಧಿನಿಯಮʼಕ್ಕೆತಿದ್ದುಪಡಿ ಮಸೂದೆ ಚರ್ಚೆಯಲ್ಲಿ ಭಾಗವಹಿಸಿದ ಅವರು, ನೀವು ಈ ಮಸೂದೆಯನ್ನು ವಿರೋಧಿಸಿದರೆ ನಮಗೆ ರಾಜಕೀಯ ಲಾಭವಾಗುತ್ತದೆ ಎಂಬುದು ಬಹಳ ಸ್ಪಷ್ಟ. ಆದರೆ ನಾವು ನೀವು ಒಟ್ಟಿಗೆ ನಡೆದರೆ ಯಾರಿಗೂ ಇದರಿಂದ ಪ್ರಯೋಜನವಾಗುವುದಿಲ್ಲ. ಆದ್ದರಿಂದ ನನಗೆ ಈ ಕ್ರೆಡಿಟ್ ಬೇಡ. ಮಸೂದೆ ಅಂಗೀಕಾರವಾದರೆ ಎಲ್ಲರ ಫೋಟೋ ಇರುವ ಜಾಹೀರಾತು ಹಾಕಲು ನಾನು ಸಿದ್ಧನಿದ್ದೇನೆ. ನಿಮಗೆ ಎಲ್ಲಾ ಕ್ರೆಡಿಟ್ (Credit) ನೀಡಲು ನಾನು ಸಿದ್ಧನಿದ್ದೇನೆ ಎಂದು ವ್ಯಂಗ್ಯವಾಡಿದರು.
ಯಾವುದೇ ದೊಡ್ಡ ಕಾಯ್ದೆ/ಯೋಜನೆ ಜಾರಿಗೆ ತಂದಾಗ ಅದರ ಕೀರ್ತಿಯನ್ನು (Credit) ಸರ್ಕಾರವೇ ತೆಗೆದುಕೊಳ್ಳುವುದು ಸಾಮಾನ್ಯ. ಈ ವಿಷಯವನ್ನು ಪ್ರಸ್ತಾಪಿಸಿದ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಬೇಡಿ. ನಮಗೆ ಇದರ ಕ್ರೆಡಿಟ್ ಬೇಡ, ನೀವು ಮಸೂದೆಯನ್ನು ಬೆಂಬಲಿಸಿದರೆ ಅದರ ಸಂಪೂರ್ಣ ಕ್ರೆಡಿಟ್ ನಿಮಗೇ ಬರೆದುಕೊಡುತ್ತೇನೆ ಎಂದು ಹೇಳಿದರು.
ಮಸೂದೆಗೆ ಬೆಂಬಲ ನೀಡಿದರೆ ಸರ್ಕಾರಿ ವೆಚ್ಚದಲ್ಲಿ ನೀಡಲಾಗುವ ಜಾಹೀರಾತುಗಳಲ್ಲಿ ವಿರೋಧ ಪಕ್ಷದ ನಾಯಕರ ಫೋಟೋಗಳನ್ನು ಮುದ್ರಿಸುವುದಾಗಿ ಹೇಳಿದರು. ಈ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಬಿಲ್ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ – ನಮಗೆ ಕ್ರೆಡಿಟ್ ಬೇಡ ಎಂದ ಮೋದಿ
ಮಾತು ಮುಂದುವರಿಸಿದ ಮೋದಿ, ಈ ಮಸೂದೆಯ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲು ವಿರೋಧ ಪಕ್ಷಗಳಿಗೆ ‘ಖಾಲಿ ಚೆಕ್’ ಆಫರ್ ನೀಡುತ್ತೇನೆ ಎಂದು ಹೇಳಿದರು.
ಮಹಿಳಾ ಮೀಸಲಾತಿಯನ್ನು ವಿರೋಧಿಸಿದರೆ ಮಹಿಳಾ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಬೆಂಬಲಿಸಿದರೆ ಅದರ ಲಾಭ ಸರ್ಕಾರಕ್ಕೆ ಹೋಗುತ್ತದೆ ಎಂಬ ಗೊಂದಲದಲ್ಲಿದ್ದ ವಿರೋಧ ಪಕ್ಷಗಳನ್ನು ಮೋದಿ ಅವರು ಈ ‘ಖಾಲಿ ಚೆಕ್’ ಆಫರ್ ಮೂಲಕ ಪೇಚಿಗೆ ಸಿಲುಕಿಸುವ ಪ್ರಯತ್ನ ಮಾಡಿದರು.
ಮಹಿಳಾ ಮೀಸಲಾತಿಯನ್ನು ವಿರೋಧಿಸುವವರು ದೀರ್ಘಕಾಲದವರೆಗೆ ಭಾರಿ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ ಮೋದಿ, ಈ ಹಿಂದೆ ಇದನ್ನು ವಿರೋಧಿಸಿದವರನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸಿಲ್ಲ ಎಂಬುದನ್ನು ನೆನಪಿಸಿದರು.
ಮಹಿಳಾ ಮೀಸಲಾತಿಯಂತಹ ಐತಿಹಾಸಿಕ ಮತ್ತು ಸಂವೇದನಾಶೀಲ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ ಎಂದು ವಿರೋಧ ಪಕ್ಷಗಳಿಗೆ ಪ್ರಧಾನಿ ಮನವಿ ಮಾಡಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ ನೀಡಿ: ಎಸ್ಪಿ ಆಗ್ರಹ

