ಬಂಗಾಳದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌ – ಫಾಲ್ಟಾ ಕ್ಷೇತ್ರದ 285 ಬೂತ್‌ಗಳಲ್ಲಿ ಮೇ 21 ರಂದು ಮರು ಮತದಾನ

3 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal Election) ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳ‌ಲ್ಲಿ ಮರುಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ ಶನಿವಾರ ಆದೇಶಿಸಿದೆ.

ಬಂಗಾಖದಲ್ಲಿ 2ನೇ ಹಂತದ ಮತದಾನದ ವೇಳೆ ಇವಿಎಂ (EVM) ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ಕಂಡುಬಂದ ಹಿನ್ನೆಲೆ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಆದೇಶ ಮಾಡಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ – ಬಿಜೆಪಿ ನಡುವೆ ಘರ್ಷಣೆ

ಮೇ 21 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಫಾಲ್ಟಾ ‌ಕ್ಷೇತ್ರದ 285 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ. ಮೇ 24 ರಂದು ಫಲಿತಾಂಶ ಹೊರಬೀಳಲಿದೆ ಎಂದು ಆಯೋಗ ತಿಳಿಸಿದೆ.

ಫಾಲ್ಟಾದಲ್ಲಿ ಇವಿಎಂ ಟ್ಯಾಂಪರಿಂಗ್‌ ಆರೋಪ!
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರ ಅಡಿಯಲ್ಲಿ ಬರುವ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಇವಿಎಂ ಯಂತ್ರಗಳ ಮೇಲಿನ ಕೆಲವು ಅಭ್ಯರ್ಥಿಗಳ ಬಟನ್ ಅಥವಾ ಪಕ್ಷದ ಗುರುತಿನ ಮೇಲೆ ಅಥವಾ ಬಟನ್ ಮೇಲೆ ಕಪ್ಪು ಟೇಪ್, ಸೆಲೋ ಟೇಪ್ ಅಥವಾ ಸುಗಂಧ ದ್ರವ್ಯವನ್ನು ಹಚ್ಚುವ ಮೂಲಕ ಮತ ಚಲಾವಣೆಗೆ ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿತ್ತು. ಫಾಲ್ಟಾ ಒಂದರಲ್ಲೇ ಅತಿ ಹೆಚ್ಚು ಅಂದರೆ 32 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿತ್ತು. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವೆಬ್‌ಕಾಸ್ಟಿಂಗ್ (Webcasting) ವಿಡಿಯೋಗಳನ್ನು ಮತ್ತು ಪ್ರಿಸೈಡಿಂಗ್ ಅಧಿಕಾರಿಗಳ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಇವಿಎಂ ಮೇಲೆ ಟೇಪ್ ಅಂಟಿಸಿರುವುದು ಸಾಬೀತಾದಲ್ಲಿ ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವುದಾಗಿ ಹೇಳಿತ್ತು. ಇವಿಎಂ ಬಟನ್‌ಗಳಿಗೆ ಸುಗಂಧ ದ್ರವ್ಯ, ಶಾಯಿ (Ink) ಅಥವಾ ಅಂಟು (Glue) ಹಚ್ಚುವುದನ್ನು ಇವಿಎಂ ತಿರುಚುವಿಕೆ (Tampering) ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಲಾಗುವುದು ಎಂದು ಆಯೋಗ ಮೊದಲೇ ತಿಳಿಸಿತ್ತು. ಅದರಂತೆ ಇದೀಗ ಮರು ಮತದಾನಕ್ಕೆ ಆದೇಶ ನೀಡಿದೆ. ಇದನ್ನೂ ಓದಿ: ಮತ ಎಣಿಕೆಗೆ ಕೇಂದ್ರ ನೌಕರರ ನಿಯೋಜನೆ ಕಾನೂನು ಬದ್ಧ – ಸುಪ್ರೀಂನಲ್ಲಿ ಟಿಎಂಸಿಗೆ ಹಿನ್ನಡೆ

ಸುಗಂಧ ದ್ರವ್ಯ ಲೇಪಿಸಿದ್ದು ಯಾಕೆ?
ನಿರ್ದಿಷ್ಟ ಅಭ್ಯರ್ಥಿಯ ಬಟನ್‌ಗೆ ಸುಗಂಧ ದ್ರವ್ಯವನ್ನು ಹಚ್ಚುವುದರಿಂದ, ಆ ಬಟನ್ ಒತ್ತಿದ ಮತದಾರನ ಬೆರಳಿಗೆ ಆ ಪರಿಮಳ ಅಂಟಿಕೊಳ್ಳುತ್ತದೆ. ಮತಗಟ್ಟೆಯಿಂದ ಹೊರಬಂದ ನಂತರ ಮತದಾರರ ಬೆರಳನ್ನು ಪರಿಮಳ ನೋಡುವ ಮೂಲಕ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕೆಲವು ರಾಜಕೀಯ ಕಾರ್ಯಕರ್ತರು ಈ ತಂತ್ರ ಬಳಸುತ್ತಾರೆ.

ಮತದಾರರು ಯಾರಿಗೆ ಮತ ನೀಡಿದ್ದಾರೆ ಎಂಬುದು ಈ ರೀತಿ ಬಹಿರಂಗವಾಗುವುದರಿಂದ, ಅವರನ್ನು ಬೆದರಿಸಲು ಅಥವಾ ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹೇರಲು ಇದು ಸಹಕಾರಿಯಾಗುತ್ತದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ 2 ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯ ಮಗ (ಅಳಿಯ) ಅಭಿಷೇಕ್ ಬ್ಯಾನರ್ಜಿ ಅವರು ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2014 ರಿಂದ ಅಭಿಷೇಕ್‌ ಬ್ಯಾನರ್ಜಿ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. 2019 ರಲ್ಲಿ ಒಟ್ಟು 7,91,127 ಮತ ಪಡೆದು 3.20 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ 2024 ರಲ್ಲಿ ಒಟ್ಟು 10,48,230 ಮತಗಳನ್ನು ಪಡೆದು 7,10,930 ಮತಗಳ ಅಂತರದಿಂದ ಗೆದ್ದಿದ್ದರು.

Share This Article