ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ

2 Min Read

-ಪ್ರತಿ ವರ್ಷ ಜಲಾವೃತಗೊಂಡು ಸಮಸ್ಯೆ ಎದುರಿಸುತ್ತಿದ್ದ ಗ್ರಾಮೀಣ ಭಾಗದ ಜನ್ರು

ಮಡಿಕೇರಿ: ಪ್ರತಿ ವರ್ಷ ಜಲಾವೃತಗೊಂಡು ಸಮಸ್ಯೆ ಉಂಟಾಗುತ್ತಿದ್ದ ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ (Gabion wall) ನಿರ್ಮಾಣ ಮಾಡಲಾಗಿದೆ.

ಕೊಡಗಿನಲ್ಲಿ ಪ್ರತಿ ವರ್ಷ ಮಳೆಗಾಲ ಬಂದ್ರೆ ಸಾಕು ಕೊಡಗಿನ ನದಿ ಪಾತ್ರದ ಜನರು, ಬೆಟ್ಟಗುಡ್ಡಗಳ ನಿವಾಸಿಗಳು ಆತಂಕಕ್ಕೆ ಒಳಗಾಗುತ್ತಾರೆ. ಅದರಲ್ಲೂ ಕಾವೇರಿ ನದಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ಸಂದರ್ಭದಲ್ಲಿ ಕೊಡಗಿನ ಹಲವಾರು ಗ್ರಾಮೀಣ ಭಾಗದ ರಸ್ತೆಗಳು ಜಲವೃತಗೊಂಡು ರಾಜ್ಯ ಹೆದ್ದಾರಿಗಳ ರಸ್ತೆ ಸಂಪರ್ಕವೇ ಬಂದ್ ಆಗುತ್ತದೆ. ಈ ನಿಟ್ಟಿನಲ್ಲಿ ಇದೀಗ ಕಾವೇರಿ ನದಿಯ ರಸ್ತೆ ಬದಿಯಲ್ಲಿ ಗೇಬಿಯನ್ ವಾಲ್ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?

ಪ್ರತಿ ವರ್ಷ ಕಾವೇರಿ ನದಿ ರಭಸಕ್ಕೆ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಟ್ಟಮುಡಿ ಗ್ರಾಮದ ಬಳಿ ಮಳೆಗಾಲ ಪೂರ್ವ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡುತ್ತಿದೆ. ಈ ಗ್ರಾಮದ ಪ್ರಮುಖ ರಸ್ತೆಯಿಂದ ನಾಪೋಕ್ಲು, ಭಾಗಮಂಡಲ, ಮೂರ್ನಾಡು ಸೇರಿದಂತೆ ಹಲವಾರು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರತಿ ಮಳೆಗಾಲ ಸಮಯದಲ್ಲಿ ಈ ರಸ್ತೆ ಸಂಪೂರ್ಣವಾಗಿ ಜಲವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈ ಹಿನ್ನೆಲೆ ಇದೀಗ ಕಾವೇರಿ ನದಿಯ ಸಮೀಪದಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ಅನ್ನು ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಹಲವಾರು ಗ್ರಾಮೀಣ ಭಾಗದ ನಿವಾಸಿಗಳು ಇದೀಗ ನಿಟ್ಟುಸಿರು ಬಿಡುವಂತೆ ಆಗಿದೆ.

ಗೇಬಿಯನ್ ವಾಲ್‌ನ ವಿಶೇಷತೆ:
ಕಬ್ಬಿಣದ ತಂತಿಯ ಪಂಜರಗಳಲ್ಲಿ ಕಲ್ಲು, ಕಾಂಕ್ರೀಟ್ ಅಥವಾ ಮರಳನ್ನು ತುಂಬಿ ನಿರ್ಮಿಸಲಾದ ಪರಿಸರ ಸ್ನೇಹಿ, ಗೋಡೆಯಾಗಿದೆ. ಇವು ಭೂಕುಸಿತ ತಡೆಯಲು, ಮಣ್ಣಿನ ಸ್ಥಿರೀಕರಣಕ್ಕೆ ಪ್ರಮುಖವಾಗಿ ಬಳಕೆಯಾಗುತ್ತವೆ. ಹೀಗಾಗಿ ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಭೂಕುಸಿತ ಉಂಟಾಗುವ ಸ್ಥಳಗಳಲ್ಲಿ ಗೇಬಿಯನ್ ವಾಲ್‌ನ ಕಟ್ಟಡವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲೂ ನದಿಯಂಚಿನಲ್ಲಿ ಭೂಕುಸಿತ ಉಂಟಾಗುವ ಸ್ಥಳಗಳಲ್ಲಿ ಗೇಬಿಯನ್ ವಾಲ್‌ನ ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ಮುಂಬರುವ ಮಳೆಗಾಲದ ಸಮಯದಲ್ಲಿ ನಾಪೋಕ್ಲು ಭಾಗದಲ್ಲಿ ಕಾವೇರಿ ನದಿಯ ಪ್ರವಾಹ ಮತ್ತು ಅಡಚಣೆ ಇಲ್ಲದೇ ರಾಜ್ಯ ಹೆದ್ದಾರಿಯಲ್ಲಿ ಓಡಾಟ ನಡೆಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ಇದನ್ನೂ ಓದಿ: ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು

Share This Article