ಬೆಂಗಳೂರು/ಧಾರವಾಡ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ (Vinay Kulkarni) ಶಾಸಕ ಸ್ಥಾನವನ್ನ ಅನರ್ಹಗೊಳಿಸಿ ರಾಜ್ಯ ವಿಧಾನಸಭೆ ಕಾರ್ಯದರ್ಶಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ಮೂಲಕ ಧಾರವಾಡ (Dharwad) ವಿಧಾನಸಭಾ ಕ್ಷೇತ್ರ ತೆರವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಏ.15ರಿಂದಲೇ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಸದಸ್ಯತ್ವ ರದ್ದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜೀವಾವಧಿ |ತೀರ್ಪಿನಲ್ಲಿ ರಾಜಧರ್ಮದ ಪಾಠ – ಉಪನಿಷತ್ ಸಾರ ಉಲ್ಲೇಖ
ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏ.13ರಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿ, ಏ.15ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆ ಇಂದು (ಮೇ 2) ಶಾಸಕ ಸ್ಥಾನ ರದ್ದಾಗಿರುವ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ.
ನಿಯಮ ಏನು ಹೇಳುತ್ತೆ?
ಸಂವಿಧಾನದ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 8, ಸಂವಿಧಾನದ 191(1ಇ) ವಿಧಿ ಪ್ರಕಾರ ಅನರ್ಹ ಮಾಡಲಾಗಿದೆ. ಜನಪ್ರತಿನಿಧಿ ಕಾಯ್ದೆ, 1951ರ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ಅಪರಾಧಿ ಎಂದು ಸಾಬೀತಾಗಿ ಕೋರ್ಟ್ ಶಿಕ್ಷೆ ಘೋಷಿಸಿದ ತಕ್ಷಣ, ಅವರ ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ. ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ, ಅವರಿಗೆ ನ್ಯಾಯಾಲಯವು ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಕೊಲೆ ಪ್ರಕರಣಗಳಲ್ಲಿ (ಐಪಿಸಿ ಸೆಕ್ಷನ್ 302 ಅಥವಾ ಬಿಎನ್‌ಎಸ್ ಸೆಕ್ಷನ್ 103) ಅಪರಾಧ ಸಾಬೀತಾದರೆ ಕನಿಷ್ಠ ಶಿಕ್ಷೆ ಜೀವಾವಧಿ ಕಾರಾಗೃಹ ವಾಸ ಅಥವಾ ಗರಿಷ್ಠ ಮರಣದಂಡನೆ ಆಗಿರುತ್ತದೆ. ಇದು 2 ವರ್ಷಗಳಿಗಿಂತ ಬಹಳ ಹೆಚ್ಚಿರುವುದರಿಂದ, ಕೊಲೆ ಪ್ರಕರಣದಲ್ಲಿ ದೋಷಿಯಾದ ತಕ್ಷಣ ಶಾಸಕ ಸ್ಥಾನ ರದ್ದಾಗುತ್ತದೆ. ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್ – ವಿನಯ್ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಅನರ್ಹತೆಯ ಅವಧಿ ಎಷ್ಟು?
ಕೇವಲ ಶಾಸಕ ಸ್ಥಾನ ರದ್ದಾಗುವುದು ಮಾತ್ರವಲ್ಲ, ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ (ಶಾಸಕ, ಸಂಸದ ಇತ್ಯಾದಿ) ಸ್ಪರ್ಧಿಸುವಂತಿಲ್ಲ.
ಲಿಲಿ ಥಾಮಸ್ ಪ್ರಕರಣ (2013): ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಇಂತಹ ಶಿಕ್ಷೆಯಾದ ತಕ್ಷಣವೇ ಅನರ್ಹತೆ ಜಾರಿಗೆ ಬರುತ್ತದೆ, ಮೇಲ್ಮನವಿ ಸಲ್ಲಿಸಲು ಈ ಹಿಂದೆ ಇದ್ದ 3 ತಿಂಗಳ ರಕ್ಷಣೆ ಇರುವುದಿಲ್ಲ. ಪಕ್ಷಾಂತರಕ್ಕೆ ಸಂಬಂಧಿಸಿದ ಅನರ್ಹತೆಯನ್ನ ಸ್ಪೀಕರ್ ಅಥವಾ ಸದನದ ಅಧ್ಯಕ್ಷರು ನಿರ್ಧರಿಸುತ್ತಾರೆ. ಕ್ರಿಮಿನಲ್ ಶಿಕ್ಷೆಗೆ ಸಂಬಂಧಿಸಿದಂತೆ, ಅಪರಾಧ ಸಾಬೀತಾದ ತಕ್ಷಣ ಅನರ್ಹತೆ ಅನ್ವಯವಾಗುತ್ತದೆ.
ಈಗಾಗಲೇ ವಿನಯ್ ಕುಲಕರ್ಣಿ ಸೇರಿ ಇಬ್ಬರು ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆಯಾಜ್ಞೆ ನೀಡಿ, ಅಮಾನತಿನಲ್ಲಿ ಇಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ?
2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. 10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿತ್ತು ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿತ್ತು. ಇನ್ನು ಇಬ್ಬರು ನಿರ್ದೋಷಿಗಳನ್ನ ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ 17 ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಆದೇಶ ಪ್ರಕಟಿಸಿದ ಕೋರ್ಟ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಕರಿಕರ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

