ಬೆಂಗಳೂರು IISc ದಾಳಿಯ ಸಂಚುಕೋರನಿಗೆ ಲಾಹೋರ್‌ನಲ್ಲಿ ಗುಂಡೇಟು – ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

2 Min Read

– 1 ವರ್ಷದ ಅವಧಿಯಲ್ಲಿ ಎರಡನೇ ಬಾರಿ ಹತ್ಯೆಗೆ ಯತ್ನ

ಇಸ್ಲಾಮಾಬಾದ್‌: ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಸಹ-ಸಂಸ್ಥಾಪಕ ಅಮೀರ್ ಹಮ್ಜಾ(Amir Hamza) ಮೇಲೆ ಗುಂಡಿನ ದಾಳಿ ನಡೆದಿದೆ.

ಲಾಹೋರ್‌ನ (Lahore) ರಸ್ತೆಯೊಂದರಲ್ಲಿ ನ್ಯೂಸ್ ಚಾನೆಲ್ ಕಚೇರಿಯ ಹೊರಗೆ ಅಪರಿಚಿತ ಬಂದೂಕುಧಾರಿಗಳು ಮೋಟಾರ್ ಬೈಕ್‌ನಲ್ಲಿ ಬಂದು ಅಮೀರ್ ಹಮ್ಜಾನನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.

ಹಮ್ಜಾ ಸ್ಥಳೀಯ ನ್ಯೂಸ್ ಚಾನೆಲ್ ಕಚೇರಿಯಿಂದ ತನ್ನ ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ, ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಆತನ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ದಾಳಿಕೋರರು ಕಾರಿನ ಕಿಟಕಿಗಳ ಮೇಲೆ ಬಹಳ ಹತ್ತಿರದಿಂದ ಶೂಟ್‌ ಮಾಡಿದ್ದಾರೆ. ದಾಳಿಯಲ್ಲಿ ಕಾರಿನ ಗಾಜುಗಳು ಪುಡಿಯಾಗಿದ್ದು ಹಮ್ಜಾನ ತೋಳು ಮತ್ತು ಭುಜಕ್ಕೆ ಗುಂಡು ತಗುಲಿದೆ ಎಂದು ವರದಿಯಾಗಿದೆ.

ದಾಳಿಯ ನಂತರ ಹಮ್ಜಾನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸರು ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ದಾಳಿ ನಡೆದಾಗ ಕಾರಿನಲ್ಲಿ ಹಮ್ಜಾನ ಜೊತೆಗೆ ಪಾಕಿಸ್ತಾನದ ನಿವೃತ್ತ ನ್ಯಾಯಾಧೀಶ ನಜೀರ್ ಅಹ್ಮದ್ ಘಾಜಿ (Nazir Ahmad Ghazi) ಅವರೂ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ರಷ್ಯಾ, ಇರಾನ್‌ ತೈಲ ಖರೀದಿಗೆ ಭಾರತಕ್ಕೆ ಅವಕಾಶ ನೀಡುವ ವಿನಾಯಿತಿಯಲ್ಲಿ ಬದಲಾವಣೆ ಮಾಡಲ್ಲ: ಅಮೆರಿಕ

 

ಯಾರಿದು ಹಮ್ಜಾ?
ಈತ ಲಷ್ಕರ್-ಎ-ತೊಯ್ಬಾ ಸಂಘಟನೆಯ 17 ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದು, ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಂತರದ ಎರಡನೇ ಅತ್ಯಂತ ಪ್ರಭಾವಿ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾನೆ.

ಅಮೀರ್ ಹಮ್ಜಾ ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಹಿಂದೆ ಈತನ ಕೈವಾಡವಿದೆ. 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮೇಲೆ ನಡೆದ ಭಯೋತ್ಪಾದಕ ದಾಳಿಯ ಮುಖ್ಯ ಸಂಚುಕೋರರಲ್ಲಿ ಈತನೂ ಒಬ್ಬನಾಗಿದ್ದಾನೆ.

2018ರ ಜಮ್ಮು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದ ಮೇಲಿನ ದಾಳಿಯಲ್ಲೂ ಈತನ ಪಾತ್ರವಿತ್ತು. ಪ್ರಭಾವಿ ವಾಗ್ಮಿ ಮತ್ತು ಬರಹಗಾರನಾಗಿದ್ದ ಈತನ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ, 2012ರಲ್ಲಿ ಅಮೆರಿಕದ ಈತನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿತು.

ಎರಡನೇ ದಾಳಿ
ಇದು ಕೇವಲ ಒಂದು ವರ್ಷದ ಅವಧಿಯಲ್ಲಿ ಆತನ ಮೇಲೆ ನಡೆದ ಎರಡನೇ ಕೊಲೆ ಯತ್ನವಾಗಿದೆ. ಈ ಹಿಂದೆ ಮೇ 2025 ರಲ್ಲೂ ಇಂತಹದ್ದೇ ಒಂದು ನಿಗೂಢ ಘಟನೆಯಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದನು.

2018ರಲ್ಲಿ ಲಷ್ಕರ್ ಸಂಘಟನೆಯ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾದಾಗ, ಈತ ಲಷ್ಕರ್‌ನಿಂದ ದೂರ ಸರಿದು ‘ಜೈಶ್-ಎ-ಮಂಕಾಫ’ ಎಂಬ ಹೊಸ ಬಣವನ್ನು ಸ್ಥಾಪಿಸಿದ್ದನು. ಆದರೂ ಈತ ಸಕ್ರಿಯವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ.

Share This Article