ಆಡಿಲೇಡ್: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್(IPL) ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ.
ಹೌದು. ಆಸ್ಟ್ರೇಲಿಯಾದಲ್ಲಿ(Australia) ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಅದರಲ್ಲೂ 2027ರ ಐಪಿಎಲ್ ಆವೃತ್ತಿಯ ಕೆಲವು ಪಂದ್ಯಗಳನ್ನು ಆಸ್ಟ್ರೇಲಿಯಾದ ಅಡಿಲೇಡ್ ಓವಲ್ (Adelaide Oval) ಮೈದಾನದಲ್ಲಿ ನಡೆಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯ ನಡೆದರೆ, ಪ್ರತಿಯಾಗಿ ಭಾರತದ ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ (BBL) ಪಂದ್ಯವನ್ನು ಆಯೋಜಿಸುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ. ಅಡಿಲೇಡ್ ಓವಲ್ ಅಧ್ಯಕ್ಷ ಜೇಮಿ ಬ್ರಿಗ್ಸ್ ಮತ್ತು ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ (SACA) ಮುಖ್ಯಸ್ಥ ವಿಲ್ ರಾಯ್ನರ್ ಅವರು ಈ ಬಗ್ಗೆ ಚರ್ಚಿಸಿದ್ದಾರೆ.
ಈ ಯೋಜನೆಗೆ ದಕ್ಷಿಣ ಆಸ್ಟ್ರೇಲಿಯಾ ಸರ್ಕಾರ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೈಕ್ ಬೇರ್ಡ್ ಅವರ ಬೆಂಬಲವೂ ಇದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಇನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ಅಧಿಕೃತ ಪ್ರಸ್ತಾವನೆ ತಲುಪಿಲ್ಲ ಎಂದು ವರದಿಯಾಗಿದೆ.
ಮುಂದಿನ ದಿನಗಳಲ್ಲಿ ಬಿಸಿಸಿಐ ಈ ಪ್ರಸ್ತಾವನೆಗೆ ಸಮ್ಮತಿ ನೀಡಿದರೆ ಭಾರತದ ಹೊರಗೆ ಐಪಿಎಲ್ ಪಂದ್ಯಗಳು ನಡೆಯುವ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಲಿದೆ.
ಬಿಬಿಎಲ್‌ನ ಹಾಲಿ ಚಾಂಪಿಯನ್ಸ್ ಆದ ಪರ್ಥ್ ಸ್ಕಾರ್ಚರ್ಸ್ (Perth Scorchers) ತಂಡವು ಚೆನ್ನೈನಲ್ಲಿ ಪಂದ್ಯವಾಡಲು ಹೆಚ್ಚು ಆಸಕ್ತಿ ಹೊಂದಿದೆ. ಸಮಯದ ಹೊಂದಾಣಿಕೆ ಮತ್ತು ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಇದರ ಉದ್ದೇಶವಾಗಿದೆ.
ಅಡಿಲೇಡ್ ಓವಲ್ ಮಾರ್ಚ್ ತಿಂಗಳಲ್ಲಿ ಐಪಿಎಲ್ ಆಯೋಜಿಸಲು ಉತ್ತಮ ಹವಾಮಾನ ಹೊಂದಿದೆ. ಈ ಮೈದಾನವು 2028ರ ಟಿ20 ವಿಶ್ವಕಪ್ ಫೈನಲ್ ಆಯೋಜಿಸಲು ಕೂಡ ಪೈಪೋಟಿ ನಡೆಸುತ್ತಿದೆ. ಇದನ್ನೂ ಓದಿ: ಒಡೆದ ಡಿಸ್‌ಪ್ಲೇನಲ್ಲೇ ಸೆಲ್ಫಿ ಕ್ಲಿಕ್ಕಿಸಿದ ಅಭಿಮಾನಿ – 40,000 ಮೌಲ್ಯದ ಫೋನನ್ನೇ ಗಿಫ್ಟ್ ಕೊಟ್ಟ ಸಂಜು
ವಿದೇಶದಲ್ಲಿ ನಡೆದಿತ್ತು ಐಪಿಎಲ್
ಭಾರತದ ಹೊರಗೆ ಐಪಿಎಲ್ (IPL) ಆಯೋಜಿಸುವುದು ಬಿಸಿಸಿಐಗೆ ಹೊಸದೇನಲ್ಲ. ಭದ್ರತಾ ಕಾರಣಗಳು ಅಥವಾ ಚುನಾವಣೆಯ ಸಮಯದ ಹಿನ್ನೆಲೆಯಲ್ಲಿ ಈ ಹಿಂದೆ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಟೂರ್ನಿಯನ್ನು ಆಯೋಜಿಸಲಾಗಿತ್ತು.
2009 – ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆದಿದ್ದರಿಂದ, ಪಂದ್ಯಗಳಿಗೆ ಭದ್ರತೆ ಒದಗಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಯಿತು. ಕೇವಲ 21 ದಿನಗಳ ತಯಾರಿಯಲ್ಲಿ ದಕ್ಷಿಣ ಆಫ್ರಿಕಾ ಈ ಬೃಹತ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು
2014 – ಲೋಕಸಭಾ ಚುನಾವಣೆಯ ಕಾರಣದಿಂದ ಟೂರ್ನಿಯ ಮೊದಲ 20 ಪಂದ್ಯಗಳನ್ನು ಯುಎಇ ಅಬುಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ನಡೆಸಲಾಗಿತ್ತು. ನಂತರ ಉಳಿದ ಪಂದ್ಯಗಳು ಭಾರತದಲ್ಲಿ ನಡೆದಿದ್ದವು. ಇದನ್ನೂ ಓದಿ: 15ನೇ ವಯಸ್ಸಿಗೆ ಟೀಂ ಇಂಡಿಯಾ ಸೇರಲು ಸಜ್ಜಾದ ಸೂರ್ಯವಂಶಿ – ಸಚಿನ್ ದಾಖಲೆ ಉಡೀಸ್?
2021 – ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಾಗ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿ ಎರಡನೇ ಹಂತದ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಪೂರ್ಣಗೊಳಿಸಲಾಗಿತ್ತು.
ಯುಎಇನಲ್ಲೇ ಜಾಸ್ತಿ ಯಾಕೆ?
ಯುಎಇ ಮತ್ತು ಭಾರತದ ಸಮಯದ ವ್ಯತ್ಯಾಸ ಕಡಿಮೆ ಇರುವುದರಿಂದ (1.5 ಗಂಟೆ) ಭಾರತೀಯ ವೀಕ್ಷಕರಿಗೆ ಪಂದ್ಯಗಳನ್ನು ವೀಕ್ಷಿಸಲು ಅನುಕೂಲಕರವಾಗಿರುತ್ತದೆ.


