ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ – ಸಂಚಾರ 6 ಗಂಟೆಯಿಂದ 2.5 ಗಂಟೆಗೆ ಇಳಿಕೆ

2 Min Read

– ಏಷ್ಯಾದ ಅತಿ ದೊಡ್ಡ ಎಲಿವೇಟೆಡ್ ವೈಲ್ಡ್‌ಲೈಫ್‌ ಕಾರಿಡಾರ್

ಡೆಹ್ರಾಡೂನ್‌: ಶೀಘ್ರ ಸಂಪರ್ಕಕ್ಕಾಗಿ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯನ್ನು (Delhi-Dehradun Expressway) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಲೋಕಾರ್ಪಣೆ ಮಾಡಿದ್ದಾರೆ.

ಉದ್ಘಾಟನೆಗೂ ಮುನ್ನಾ ಏಷ್ಯಾದ (Asia) ಮೊದಲ ಅತಿ ಉದ್ದದ ಸಹರಾನ್‌ಪುರದ ಎಲಿವೇಟೆಡ್ ವೈಲ್ಡ್‌ಲೈಫ್‌ ಕಾರಿಡಾರ್ ಅನ್ನು ಪರಿಶೀಲಿಸಿದರು. ಬಳಿಕ ರೋಡ್‌ಶೋ ನಡೆಸಿದ ಪ್ರಧಾನಿ, ಡೆಹ್ರಾಡೂನ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಎಕ್ಸ್‌ಪ್ರೆಸ್‌ವೇ ವಿಶೇಷ ಏನು?
ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಎಂದೂ ಕರೆಯಲ್ಪಡುವ 213 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ದೆಹಲಿ,ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಹಾದುಹೋಗುತ್ತದೆ. 12,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಎಕ್ಸ್‌ಪ್ರೆಸ್‌ವೇಯ ಅತ್ಯಂತ ವಿಶಿಷ್ಟ ಅಂಶವೆಂದರೆ 12 ಕಿ.ಮೀ ಉದ್ದದ ಎಲಿವೇಟೆಡ್ (ಮೇಲ್ಸೇತುವೆ) ರಸ್ತೆ. ಇದು ರಾಜಾಜಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುತ್ತದೆ. ಪ್ರಾಣಿಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಯನ್ನು ಎತ್ತರದಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳ ಓಡಾಟಕ್ಕೆ ಅಡ್ಡಿಯಾಗದಂತೆ ನಿರ್ಮಿಸಲಾದ ಏಷ್ಯಾದಲ್ಲೇ ಅತಿ ಉದ್ದದ ಕಾರಿಡಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಇದನ್ನೂ ಓದಿ: ಪಾಕ್‌ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಮೋದಿಗೆ ಟ್ರಂಪ್‌ ಕರೆ – 40 ನಿಮಿಷ ಮಾತುಕತೆ

ಈ ರಸ್ತೆಯಿಂದಾಗಿ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಅಂತರ 235 ಕಿ.ಮೀ ನಿಂದ 213 ಕಿ.ಮೀ ಗೆ ತಗ್ಗಿದೆ. ಪ್ರಯಾಣದ ಸಮಯ 6 ಗಂಟೆಯಿಂದ ಕೇವಲ 2.5 ಗಂಟೆಗೆ ಇಳಿಕೆಯಾಗಿದೆ. ದೌಲತ್‌ಪುರ ಮತ್ತು ಡೆಹ್ರಾಡೂನ್ ನಡುವೆ 340 ಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.

ಪ್ರವೇಶ-ನಿಯಂತ್ರಿತ ಹೆದ್ದಾರಿಯು 10 ಇಂಟರ್‌ಚೇಂಜ್‌ಗಳು, 3 ರೈಲ್ವೇ ಸೇತುವೆಗಳು, 4 ಪ್ರಮುಖ ಸೇತುವೆಗಳು ಮತ್ತು 12 ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ. 4 ಟೋಲ್ ಪ್ಲಾಜಾಗಳನ್ನು ಒಳಗೊಂಡಿರುವ ಈ ಹೆದ್ದಾರಿಯಲ್ಲಿ ಪ್ರತಿದಿನ 20 ಸಾವಿರದಿಂದ 30 ಸಾವಿರ ವಾಹನಗಳು ಸಂಚರಿಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.

ಇಡೀ ಯೋಜನೆಯನ್ನು 4 ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಈಗ 6 ಪಥಗಳಿದ್ದು ಭವಿಷ್ಯದಲ್ಲಿ ಇದನ್ನು 8 ಪಥಗಳಿಗೆ ವಿಸ್ತರಿಸುವ ಅವಕಾಶವಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಚಲಿಸಲು ವಿನ್ಯಾಸಗೊಳಿಸಲಾಗಿದೆ.

 

Share This Article