Census 2027 | ಈ ಸುದ್ದಿ ಓದಿ ಮನೆಯಲ್ಲೇ ಕುಳಿತೇ 15 ನಿಮಿಷದ ಒಳಗಡೆ ನಿಮ್ಮ ವಿವರವನ್ನು ಭರ್ತಿ ಮಾಡಿ!

2 Min Read

ಬೆಂಗಳೂರು: ಇಂದಿನಿಂದ ಭಾರತದಲ್ಲಿ ರಾಷ್ಟ್ರೀಯ ಜನಗಣತಿ (Census 2027) ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಇದು ದೇಶದ ಮೊದಲ ಡಿಜಿಟಲ್ ಜನಗಣತಿಯಾಗಿದ್ದು(Digital Census) ಜನರೇ ತಮ್ಮ ವಿವರಗಳನ್ನು ತಾವೇ ಸುಲಭವಾಗಿ ದಾಖಲಿಸಬಹುದು.

ಕರ್ನಾಟಕ ಸೇರಿದಂತೆ ಗೋವಾ, ಮಿಜೋರಾಂ, ಒಡಿಶಾ, ಸಿಕ್ಕಿಂ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದ ಜನರು ಏ.15ರವರೆಗೆ ಡಿಜಿಟಲ್‌ ಮೂಲಕ ತಮ್ಮ ಮನೆಯ ವಿವರಗಳನ್ನು ಸುಲಭವಾಗಿ ಎಂಟ್ರಿ ಮಾಡಬಹುದು.

ಡಿಜಿಟಲ್‌ನಲ್ಲಿ ಹೇಗೆ?
ಹಂತ -1 ಮೊದಲು www.ce.census.gov.in ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕುಟುಂಬದ ಯಜಮಾನ ಹೆಸರು, ಮೊಬೈಲ್‌ ಸಂಖ್ಯೆಯನ್ನು ನಮೂದಿಸಬೇಕು. ಸರಿಯಾದ ಮೊಬೈಲ್‌ ನಂಬರ್‌ ನಮೂದಿಸಿದರೆ ಮೊಬೈಲಿಗೆ ಒಟಿಪಿ ಸಂಖ್ಯೆ ಬರುತ್ತದೆ.

ಹಂತ – 2 ಬಂದಿರುವ ಒಟಿಪಿ ಸಂಖ್ಯೆಯನ್ನು ನಮೂದಿಸಿದ ಬಳಿಕ ತೆರೆಯುವ ಪುಟದಲ್ಲಿ ಭಾಷೆಯನ್ನು ಆಯ್ಕೆ ಮಾಡಬೇಕು. ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಾಹಿತಿ, ಪಿನ್‌ಕೋಡ್‌ ನಮೂದಿಸಬೇಕು. ಈ ವೇಳೆ ಪರದೆಯಲ್ಲಿ ನೀವು ತೋರಿಸಿದ ಗ್ರಾಮ, ನಗರದ ನಕ್ಷೆ ಕಾಣುತ್ತದೆ. ಈ ಜಾಗದಲ್ಲಿ ನೀವು ನೆಲೆಸಿರುವ ಮನೆಯ ಜಾಗಕ್ಕೆ ಡಿಜಿಟಲ್‌ ಮ್ಯಾಪ್‌ನಲ್ಲಿ ಮಾರ್ಕ್‌ ಮಾಡಬೇಕು.

ಹಂತ – 3 ಈ ಹಂತದಲ್ಲಿ ಮನೆಯ ಮಾಲೀಕತ್ವ, ಮನೆಯ ಗೋಡೆ/ಛಾವಣಿ, ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಅಡುಗೆ ಇಂಧನ, ವಾಹನ, ಸಂಪರ್ಕ ಸಾಧನಗಳು, ಸ್ಮಾರ್ಟ್‌ಫೋನ್ ಬಳಕೆ.. ಹೀಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಅಲ್ಲೇ ಆಯ್ಕೆಗಳನ್ನು ನೀಡಲಾಗಿದೆ. ಈ ಆಯ್ಕೆಗಳ ಪೈಕಿ ಒಂದು ಆಯ್ಕೆಯನ್ನು ಮಾತ್ರ ಆರಿಸಿಕೊಳ್ಳಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಮತ್ತೊಂದು ಪುಟ ತೆರೆಯುತ್ತದೆ. ಅಲ್ಲೂ ಇದೇ ರೀತಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಬೇಕಾಗುತ್ತದೆ.

ಹಂತ – 4 ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕವೂ ಯಾವುದಾದರೂ ತಪ್ಪು ಮಾಹಿತಿ ನಮೂದಿಸಿದ್ದರೆ ಹಿಂದಿನ ಪುಟಕ್ಕೆ ಹೋಗಿ ಎಡಿಟ್‌ ಮಾಡಲು ಅವಕಾಶವಿದೆ.

ಹಂತ – 5 ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ನಿಮ್ಮ ಸ್ವಯಂ ಗಣತಿ ಯಶಸ್ವಿಯಾಗಿ ಸಲ್ಲಿಸಲಾಗಿದೆ ಸ್ಕ್ರೀನ್‌ನಲ್ಲಿ ಮೆಸೇಜ್‌ ಜೊತೆ ಸ್ವಯಂ ಗಣತಿಯ ಗಣತಿ ಐಡಿಯೂ ಕಾಣುತ್ತದೆ. ಈ ಐಡಿ ಮನೆಯ ಯಜಮಾನ ಮೊಬೈಲಿಗೆ ಬಂದಿರುತ್ತದೆ.

 

ಈ ವಿಚಾರ ಗಮನದಲ್ಲಿರಲಿ
– ಆರಂಭದಲ್ಲೇ ಭಾಷೆಯ ಆಯ್ಕೆ ಇರುತ್ತದೆ. ಇಲ್ಲಿ ನೀವು ಕನ್ನಡವನ್ನು ಆಯ್ಕೆ ಮಾಡಿದರೆ ಎಲ್ಲಾ ಪ್ರಶ್ನೆಗಳು ಕನ್ನಡದಲ್ಲಿ ಇರುತ್ತವೆ.
– ಡಿಜಿಟಲ್‌ ಸಮೀಕ್ಷೆಗೆ ಮೊಬೈಲ್‌ ಸಂಖ್ಯೆ ಕಡ್ಡಾಯ, ಇಮೇಲ್‌ ಕಡ್ಡಾಯವಲ್ಲ. ಇಮೇಲ್‌ ಅಪ್‌ಡೇಟ್‌ ಮಾಡಲು ಆಯ್ಕೆ ಇದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಮನೆಯ ಯಜಮಾನನ ಮೊಬೈಲಿಗೆ ಬರುವ ಸಂದೇಶವೇ ಇಮೇಲ್‌ಗೂ ಬರುತ್ತದೆ.
– ಆರಂಭದಲ್ಲೇ ಮನೆಯ ನಕ್ಷೆಯನ್ನು ಗುರುತಿಸಲು ಕಷ್ಟವಾಗಬಹುದು. ನೀವು ಸರಿಯಾದ ವಿಳಾಸ, ಪಿನ್‌ಕೋಡ್‌ ಹಾಕಿದರೆ ಆ ಗ್ರಾಮ/ ನಗರದ ಮ್ಯಾಪ್‌ ಸ್ಪಷ್ಟವಾಗಿ ಕಾಣುತ್ತದೆ. ನೀವು ಝೂಮ್‌ ಮಾಡಿ ಮನೆಯನ್ನು ಮಾರ್ಕ್‌ ಮಾಡಬಹುದು. ನೀವು ಮಾರ್ಕ್‌ ಮಾಡಿದ ಜಾಗದ ವಿಳಾಸವೂ ಅಲ್ಲೇ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಮನೆಯನ್ನು ಸರಿಯಾಗಿ ಮಾರ್ಕ್‌ ಮಾಡಿದ ಬಳಿಕವಷ್ಟೇ ಸಮೀಕ್ಷೆಯ ಪ್ರಶ್ನೆಗಳಿರುವ ಪುಟ ತೆರೆಯುತ್ತದೆ.
– ಏಪ್ರಿಲ್‌ 15ರ ನಂತರ ಮನೆ ಮನೆಗೆ ಗಣತಿದಾರರು ಬರುತ್ತಾರೆ. ಈ ವೇಳೆ ಮೊಬೈಲಿಗೆ ಬಂದಿರುವ ಗಣತಿ ಐಡಿಯನ್ನು ನೀಡಿದರೆ ಮತ್ತೆ ಪುನ: ಸಮೀಕ್ಷೆ ಮಾಡುವ ಅಗತ್ಯ ಇರುವುದಿಲ್ಲ.

Share This Article