ಕೆಕೆಆರ್‌ ಆಲ್‌ರೌಂಡ್‌ ಆಟಕ್ಕೆ ಸನ್‌ ಬರ್ನ್‌ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

2 Min Read

ಹೈದರಾಬಾದ್: 300 ರನ್‌ಗಳನ್ನು ಪೇರಿಸುವ ಗುರಿಯೊಂದಿಗೆ 19ನೇ ಆವೃತ್ತಿ ಐಪಿಎಲ್‌ ಪ್ರವೇಶಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಮೊತ್ತ ಕಲೆಹಾಕಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ವಿರುದ್ಧದ ಪಂದ್ಯದಲ್ಲಿ ತವರಿನಲ್ಲೇ 165 ರನ್‌ಗೆ ಆಲೌಟ್‌ ಆಗಿ ಹೀನಾಯ ಸೋಲಿಗೆ ತುತ್ತಾಗಿದೆ.

ಹೌದು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯ 45ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡವು 19 ಓವರ್‌ಗಳ ಅಂತ್ಯಕ್ಕೆ 165 ರನ್ ಗಳಿಸಿ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್‌ 18.2 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡ ಆರಂಭಿಕ ಆಘಾತ ಅನುಭವಿಸಿತು. ಅಭಿಷೇಕ್ ಶರ್ಮಾ ಕೇವಲ 15 ರನ್ ಗಳಿಸಿ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು. ಒಂದನೇ ವಿಕೆಟ್‌ಗೆ ಜೊತೆಯಾದ ಟ್ರಾವಿಸ್ ಹೆಡ್ ಹಾಗೂ ಇಶಾನ್ ಕಿಶನ್ 32 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟವಾಡಿದರು. ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 61 ರನ್ (9 ಫೋರ್, 3 ಸಿಕ್ಸ್) ಗಳಿಸಿ ಔಟಾದರು. ಇಶಾನ್ ಕಿಶನ್ 29 ಎಸೆತಗಳಲ್ಲಿ 42 ರನ್ (4 ಬೌಂಡರಿ, 2 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಹೆನ್ರಿಚ್ ಕ್ಲಾಸೆನ್ 11 ರನ್, ಕನ್ನಡಿಗ ಸಮ್ರಾನ್ ರವಿಚಂದ್ರನ್ 4 ರನ್, ಅನಿಕೇತ್ ವರ್ಮಾ 6 ರನ್, ಸಲೀಲ್ ಅರೋರ 2 ರನ್, ನಾಯಕ ಪ್ಯಾಟ್ ಕಮ್ಮಿನ್ಸ್ 2 ರನ್ ಗಳಿಸಿ ಔಟಾದರು.

ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್, ಸುನಿಲ್ ನರೇನ್ ಹಾಗೂ ಕಾರ್ತಿಕ್ ತ್ಯಾಗಿ 2 ವಿಕೆಟ್ ಪಡೆದರೆ ವೈಭವ್ ಅರೋರ, ಗ್ರೀನ್ ಹಾಗೂ ಅಂಕುಲ್ ರಾಯ್ ತಲಾ 1 ವಿಕೆಟ್ ಕಬಳಿಸಿದರು.

166 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 18.2 ಓವರ್‌ಗಳಲ್ಲಿ 169 ರನ್ ಗಳಿಸಿ ಗೆಲುವು ಕಂಡಿತು. ಫಿನ್ ಅಲೆನ್ 13 ಎಸೆತಗಳಲ್ಲಿ 29 ರನ್ (3 ಬೌಂಡರಿ, 2 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಜಿಂಕ್ಯ ರಹಾನೆ 36 ಎಸೆತಗಳಲ್ಲಿ 43 ರನ್ (4 ಫೋರ್, 1 ಸಿಕ್ಸ್) ಸಿಡಿಸಿ ಔಟಾದರು. ರಹಾನೆ ಹಾಗೂ ಅಲೆನ್ 24 ಎಸೆತಗಳಿಗೆ 49 ರನ್‌ಗಳ ಜೊತೆಯಾಟವಾಡಿದರು. ಬಳಿಕ ಫೀಲ್ಡಿಗಿಳಿದ ರಘುವಂಶಿ ರಹಾನೆಯೊಂದಿಗೆ ಜೊತೆಯಾಟವಾಡಿ 66 ಎಸೆತಗಳಲ್ಲಿ 84 ರನ್ ಕಲೆಹಾಕಿದರು. ರಘುವಂಶಿ 47 ಎಸೆತಗಳಿಗೆ 59 ರನ್ (5 ಫೋರ್, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಔಟಾದರು. ಕೊನೆಯಲ್ಲಿ ರಿಂಕು ಸಿಂಗ್ 11 ಎಸೆತಗಳಲ್ಲಿ 22 ರನ್ (2 ಫೋರ್, 1 ಸಿಕ್ಸ್) ಗಳಿಸಿದರೆ ಗ್ರೀನ್ 3 ಎಸೆತಗಳಲ್ಲಿ 3 ರನ್ ಗಳಿಸಿ ಅಜೇಯರಾಗಿ ಉಳಿದರು.

ಎಸ್‌ಆರ್‌ಹೆಚ್ ತಂಡದ ಪರ ಕಮ್ಮಿನ್ಸ್, ಶಿವಾಂಗ್ ಕುಮಾರ್ ಹಾಗೂ ಸಕೀಬ್ ಹುಸೇನ್ ತಲಾ ಒಂದೊಂದು ವಿಕೆಟ್ ಕಿತ್ತರು.

Share This Article