– ಪರಮೇಶ್ವರ್ ಉಪಯೋಗ ಇಲ್ಲ, ಅಸಮರ್ಥ ಅನ್ನೋದನ್ನ ನಾನು ಒಪ್ಪಲ್ಲ
– ಪ್ರಧಾನಿ ಸಾಮರ್ಥ್ಯವಿರುವ ಖರ್ಗೆ ಅವ್ರು, ಸಿಎಂ ಆಗಿ ಬಂದ್ರೆ ಸ್ವಾಗತಿಸ್ತೇನೆ
ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದ್ರೆ ಅದನ್ನ ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮೂಲಕ ಹೇಳುವ ಅವಶ್ಯಕತೆಯಿಲ್ಲ. ಕತ್ತಿ ಗುರಾಣಿ ಹಿಡಿದು ಸಿಎಂ ಸ್ಥಾನ ಕೇಳಬೇಕಿಲ್ಲ. ಹೇಳಬೇಕಾದವರಿಗೆ ಖಾಸಗಿಯಾಗಿ ಹೇಳಿದ್ದೇನೆ. ʻಪಬ್ಲಿಕ್ ಟಿವಿʼ ವಿಶೇಷ ಕಾರ್ಯಕ್ರಮದ ಓಪನ್ ಟಾಕ್‌ನಲ್ಲಿ ಗೃಹಸಚಿವರಾದ ಪರಮೇಶ್ವರ್ (G Parameshwar) ಆಡಿದ ಮಾತುಗಳಿವು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ (Dalit CM) ಬೇಡಿಕೆ ವಿಚಾರ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ನಾವು ಆಶಾವಾದಿಗಳಾಗಿದ್ದೇವೆ, ದಲಿತ ಸಿಎಂ ಹುದ್ದೆಗೆ ನನ್ನನ್ನ ಪರಿಗಣಿಸಲ್ಲ ಅಂತ ನಾನ್ಯಾಕೆ ಅಂದುಕೊಳ್ಳಲಿ? ಹೈಕಮಾಂಡ್‌ಗೆ ಪರಮೇಶ್ವರ್ ಏನು ಅಂತ ಗೊತ್ತಿದೆ, ನನ್ನ ಸಾಮರ್ಥ್ಯ ಗೊತ್ತಿದೆ. ಒಂದು ವೇಳೆ ಪರಮೇಶ್ವರ್ ಅವರನ್ನ ಮುಖ್ಯಮಂತ್ರಿ ಮಾಡಿದ್ರೆ ರಾಜ್ಯ ನಡೆಸುವ ಸಾಮರ್ಥ್ಯ ಇದೆ ಅನ್ನೋದೂ ಗೊತ್ತಿದೆ. ಮಾಧ್ಯಮದಲ್ಲಿ ಕುಳಿತು ಸಿಎಂ ಮಾಡಿ ಅಂತ ಕೇಳುವ ಅವಶ್ಯಕತೆ ನನಗಿಲ್ಲ ಅಂದಿದ್ದಾರೆ.

ಇನ್ನೂ ಸಿದ್ದರಾಮಯ್ಯ (Siddaramaiah) ಅವರನ್ನ ಕೆಳಗಿಳಿಸಿದ್ರೆ ನಿಮ್ಮ ಹೆಸರನ್ನ ಪ್ರಸ್ತಾಪಿಸ್ತಾರಾ? ಅನ್ನೂ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಅವರು ನನ್ನ ಹೆಸರು ಹೇಳ್ತಾರೆ ಅಂತ ಹೇಳೋಕಾಗುತ್ತಾ? ಹೈಕಮಾಂಡ್‌ಗೆ ನನ್ನ ಮೇಲೆ ವಿಶ್ವಾಸ ಇದೆ, ತೀರ್ಮಾನ ಮಾಡೇ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಇನ್ನೂ ʻಕೊಟ್ಟ ಮಾತು ಉಳಿಸಿಕೊಳ್ಳಬೇಕುʼ ಎನ್ನುವ ಡಿಕೆ ಬ್ರದರ್ಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿಎಂ ಸ್ಥಾನ ಕೇಳೋದ್ರಲ್ಲಿ ತಪ್ಪೇನಿಲ್ಲ. ನಾವು ಕೂಡ ಖಾಸಗಿ ಆಗಿ ಕೇಳಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರನ್ನೇ ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದ್ರೆ ನೀವು ಒಪ್ಪುತ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿ ಒಪ್ಪುತ್ತೇನೆ, ನಾನೇ ಮೊದಲು ಸ್ವಾಗತ ಮಾಡ್ತೀನಿ. ಖರ್ಗೆ ಅವರು ನನಗಿಂತ ಹಿರಿಯರು, ನನ್ನ ಹಿರಿಯಣ್ಣ ಅವರು. ಖರ್ಗೆ ಅವರು ಪ್ರಧಾನಿ ಆಗುವ ಸಾಮರ್ಥ್ಯ ಇರುವವರು, ದಲಿತ ಸಮುದಾಯವನ್ನ ಪ್ರತಿನಿಧಿಸಿ, ಮುಖ್ಯಮಂತ್ರಿ ಆಗಿ ಬರ್ತಾರೆ ಅಂತ ಹೈಕಮಾಂಡ್ ತೀರ್ಮಾನ ಮಾಡಿದ್ರೆ, ನಾನಂತೂ ಸ್ವಾಗತ ಮಾಡ್ತೀನಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿ ಮಾತನಾಡಲು ಪರಮೇಶವರ್ ಅವರಿಗೆ ಭಯನಾ? ಅನ್ನೋ ಮಾತಿಗೆ ಉತ್ತರಿಸಿ, ನನಗೇಕೆ ಭಯ? ಕಾಂಗ್ರೆಸ್ ಪಕ್ಷದಲ್ಲಿ ಒಂದು ಚೌಕಟ್ಟಿದೆ, ಅದಕ್ಕೆ ತಕ್ಕಂತೆ ನಡೆದುಕೊಳ್ತಿದ್ದೇನೆ. ಅದನ್ನ ಬಿಟ್ಟು ಪರಮೇಶ್ವರ್ ಉಪಯೋಗ ಇಲ್ಲ, ಅಸಮರ್ಥ ಅನ್ನೋದು ಬಂದ್ರೆ ಒಪ್ಪಲು ನಾನು ತಯಾರಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

