56gw ದಾಟಿದ ಭಾರತದ ಪವನಶಕ್ತಿ ಉತ್ಪಾದನೆ ಸಾಮರ್ಥ್ಯಕ್ಕೆ ಮೋದಿ ಶ್ಲಾಘನೆ: ಜೋಶಿ

2 Min Read

– ಸೌರಶಕ್ತಿ, ಪವನಶಕ್ತಿ ಮೇಲೆ ಮನ್ ಕೀ ಬಾತ್‌ನಲ್ಲಿ ಪ್ರಖರ ಬೆಳಕು ಚೆಲ್ಲಿದ ಪ್ರಧಾನಿ
– ಹುಬ್ಬಳ್ಳಿಯಲ್ಲಿ ಜನಸಾಮಾನ್ಯರೊಡನೆ 133ನೇ ಮನ್ ಕೀ ಬಾತ್ ವೀಕ್ಷಿಸಿದ ಸಚಿವ ಜೋಶಿ

ಹುಬ್ಬಳ್ಳಿ: ದೂರದೃಷ್ಟಿ ನಾಯಕತ್ವದಿಂದ ದೇಶದ ಇಂಧನ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕೀ ಬಾತ್ ಮೂಲಕ ಭಾರತದ ಸೌರಶಕ್ತಿ, ಪವನ ಶಕ್ತಿ ಮೇಲೆ ಪ್ರಖರ ಬೆಳಕು ಚೆಲ್ಲಿದ್ದಾರೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಬಣ್ಣಿಸಿದರು.

ಹುಬ್ಬಳ್ಳಿಯ 52ನೇ ವಾರ್ಡ್ ಬೂತ್ ನಂ.202ರಲ್ಲಿ ಜನಸಾಮಾನ್ಯರೊಡನೆ ಪ್ರಧಾನಿ ಮೋದಿ ಅವರ 133ನೇ ಮನ್ ಕೀ ಬಾತ್ (Mann Ki Baat) ವೀಕ್ಷಿಸಿ ಮಾತನಾಡಿ, ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆ ಬಗ್ಗೆ ಪ್ರಧಾನಿ ಅತ್ಯಂತ ವಿಶ್ವಾಸಾರ್ಹ ಮಾತುಗಳನ್ನಾಡಿದ್ದು, ಇದು ಶುದ್ಧ ಇಂಧನ ಪರಿವರ್ತನೆ ಪಥದಲ್ಲಿ ಸಾಗಿದ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದೆ ಎಂದು ಹೇಳಿದರು. ಇದನ್ನೂ ಓದಿ: White House Dinner Shooting | ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ

ಪ್ರಧಾನಿಯವರ ‘ಮನ್ ಕೀ ಬಾತ್ ಸಮಾಜಸೇವೆ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ನಮಗೆ ಹೊಸ ಚೈತನ್ಯ ತುಂಬಿದೆ. ದೇಶದ ಪ್ರಗತಿ, ಸಾಧಕರ ಯಶೋಗಾಥೆ ಮತ್ತು ನವ ಭಾರತದ ಸಂಕಲ್ಪಗಳನ್ನು ಹಂಚಿಕೊಳ್ಳುವ ಈ ವಿಶಿಷ್ಠ ಕಾರ್ಯಕ್ರಮ ಮಾದರಿ ಎಂದರು.

ಸಣ್ಣ ಸಣ್ಣ ಬದಲಾವಣೆಗಳ ಮೂಲಕವೇ ದೊಡ್ಡ ಕ್ರಾಂತಿಗೆ ನಾಂದಿ ಹಾಡಿದ್ದಾರೆ ಪ್ರಧಾನಿ ಮೋದಿ. ಸೌರ ವಿದ್ಯುತ್ ಮತ್ತು ಗಾಳಿ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುತ್ತ ಶುದ್ಧ ಇಂಧನ ವಲಯಕ್ಕೆ ಶಕ್ತಿ ತುಂಬಿದ್ದಾರೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತ ಹೊಸ ಮೈಲುಗಲ್ಲು ಸ್ಥಾಪಿಸುವುದನ್ನು ಮನ್ ಕೀ ಬಾತ್ ಮೂಲಕ ತೆರೆದಿಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

56gw ದಾಟಿದ ಪವನಶಕ್ತಿ: ಭಾರತದ ಪವನ ಶಕ್ತಿ ಸಾಮರ್ಥ್ಯ ಇದೀಗ 56GW ದಾಟಿದೆ. ಕಳೆದ ವರ್ಷ 6GW ಸೇರಿಸಿದ್ದು, ಇದು ಇದುವರೆಗಿನ ಅತ್ಯಧಿಕ ಸಾಮರ್ಥ್ಯ ಸೇರ್ಪಡೆಯಾಗಿದೆ. ಭಾರತ ಪವನಶಕ್ತಿ ಪ್ರಯಾಣವನ್ನು ವೇಗಗೊಳಿಸುತ್ತಿದೆ ಎಂದು ಸಚಿವ ಜೋಶಿ ಹೇಳಿದರು. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಸುಡುವ ಬಿಸಿಲು: ಬತ್ತಿ ಬರಿದಾದ ಐತಿಹಾಸಿಕ ಮುಚಖಂಡಿ ಕೆರೆ!

ದೇಶದಲ್ಲಿ ಇಂಧನ ಸುಸ್ಥಿರತೆ, ಶುದ್ಧ ಇಂಧನ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ ಸೌರ ಮತ್ತು ಪವನ ಶಕ್ತಿ ಅಳವಡಿಕೆ ಅತ್ಯಗತ್ಯವಾಗಿದೆ ಎನ್ನುವ ಮೂಲಕ ಪ್ರಧಾನಿ ಮೋದಿ ಅವರು, ವಿಕಸಿತ ಭಾರತಕ್ಕಾಗಿ ಶುದ್ಧ ಇಂಧನ ಸಾಮರ್ಥ್ಯದ ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದ್ದಾರೆ ಎಂದರು.

ಭಾರತದತ್ತ ಜಗತ್ತಿನ ದೃಷ್ಟಿ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆ ಯುವಕರಿಗೆ ಹೊಸ ಅವಕಾಶಗಳು ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಭಾರತದ ವಿಕಾಸದಲ್ಲಿ ಪವನಶಕ್ತಿ ಹೊಸ ಭಾಷ್ಯ ಬರೆದಿದೆ. ವಿಂಡ್ ಎನರ್ಜಿಯಲ್ಲಿ ಜಗತ್ತಿನಲ್ಲಿ 4ನೇ ಸ್ಥಾನದಲ್ಲಿರುವ ಭಾರತವನ್ನು ಇಂದು ಜಗತ್ತೇ ಅನುಸರಣೆ ಮಾಡುತ್ತಿರುವ ಬಗ್ಗೆ ಉಲ್ಲೇಖಿಸಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ್ ಟೆಂಗಿನಕಾಯಿ, ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಜಯತೀರ್ಥ ಕಟ್ಟಿ, ಬಂಗಾರು ಹನುಮಂತು, ಭರತ ಬೊಮ್ಮಾಯಿ, ಮಹೇಂದ್ರ ಕೌತಾಳ, ಕೃಷ್ಣಾ ಗಂಡಗಾಳೇಕರ್, ಪ್ರಭು ನವಲಗುಂದಮಠ ಸೇರಿದಂತೆ ಗಣ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

Share This Article