ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ರಾಜೀನಾಮೆ

2 Min Read

ನವದೆಹಲಿ: ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ ಸಿ.ವಿ. ಆನಂದ ಬೋಸ್ (C V Ananda Bose) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನವೆಂಬರ್ 2022 ರಲ್ಲಿ ಅಧಿಕಾರ ಸ್ವೀಕರಿಸಿದ್ದ ಆನಂದ ಬೋಸ್‌ ರಾಜ್ಯ ವಿಧಾನಸಭಾ ಚುನಾವಣೆಗೆ (Assembly Elections) ಮುನ್ನ ತಮ್ಮ ಸ್ಥಾನಕ್ಕೆ ದೆಹಲಿಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಕಚೇರಿಯಲ್ಲಿ ಸಾಕಷ್ಟು ಸಮಯ ಕಳೆದಿರುವುದರಿಂದ ಮುಂದೆ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದರು.

ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಗುರುವಾರ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಗುಪ್ತಾ ಅವರನ್ನು ಜುಲೈ 2025 ರಲ್ಲಿ ಲಡಾಖ್‌ನ ಮೂರನೇ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿತ್ತು.

ಈ ಮಧ್ಯೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಗೃಹ ಸಚಿವ ಅಮಿತ್ ಶಾ ಅವರು ಆರ್.ಎನ್. ರವಿ (RN Ravi) ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಿದ್ದಾರೆ ಎಂದು ಎಕ್ಸ್‌ನಲ್ಲಿ ತಿಳಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ರಾಜೀನಾಮೆಯ ಹಠಾತ್ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ತೀವ್ರ ಕಳವಳಗೊಂಡಿದ್ದೇನೆ. ಅವರ ರಾಜೀನಾಮೆಯ ಹಿಂದಿನ ಕಾರಣಗಳು ಈ ಕ್ಷಣಕ್ಕೆ ನನಗೆ ತಿಳಿದಿಲ್ಲ. ಆದಾಗ್ಯೂ ಸಂದರ್ಭಗಳನ್ನು ಗಮನಿಸಿದರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲು ಕೆಲವು ರಾಜಕೀಯ ಹಿತಾಸಕ್ತಿಗಳಿಗಾಗಿ ರಾಜ್ಯಪಾಲರು ಕೇಂದ್ರ ಗೃಹ ಸಚಿವರಿಂದ ಕೆಲವು ಒತ್ತಡಕ್ಕೆ ಒಳಗಾಗಿದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ ಎಂದಿದ್ದಾರೆ.

ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ನನಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಥಾಪಿತ ಸಂಪ್ರದಾಯದ ಪ್ರಕಾರ ಅವರು ನನ್ನೊಂದಿಗೆ ಎಂದಿಗೂ ಸಮಾಲೋಚಿಸಲಿಲ್ಲ. ಇಂತಹ ಕ್ರಮಗಳು ಭಾರತದ ಸಂವಿಧಾನದ ಉದ್ದೇಶವನ್ನು ಹಾಳುಮಾಡುತ್ತವೆ ಮತ್ತು ನಮ್ಮ ಫೆಡರಲ್ ರಚನೆಯ ಅಡಿಪಾಯದ ಮೇಲೆಯೇ ದಾಳಿ ಮಾಡುತ್ತವೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸಬೇಕು ಮತ್ತು ರಾಜ್ಯಗಳ ಘನತೆಯನ್ನು ಕುಗ್ಗಿಸುವ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಮಮತಾ ಬ್ಯಾನರ್ಜಿ ಸಿಟ್ಟು ಹೊರಹಾಕಿದ್ದಾರೆ.

Share This Article