ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರು ರಾಜ್ಯ ನಾಯಕರು ಮತ್ತು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ (Chaluvaraya Swamy) ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ, ರಾಜಣ್ಣರನ್ನ ಹಣಿಯಲು ಬಿಜೆಪಿ ನಾಯಕ ಶ್ರೀರಾಮುಲುರನ್ನ (Sriramulu) ಕಾಂಗ್ರೆಸ್‌ಗೆ ತರಲು ಡಿ.ಕೆ ಶಿವಕುಮಾರ್ ಪ್ರಯತ್ನ ಮಾಡ್ತಿದ್ದಾರೆ ಎಂಬ ಜನಾರ್ದನ ರೆಡ್ಡಿಯವರ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು, ಯಾರನ್ನೂ ತುಳಿಯಲು ಸಾಧ್ಯವಿಲ್ಲ. ಸತೀಶ್ ಜಾರಕಿಹೋಳಿ ಹಿರಿಯ ನಾಯಕರು. ಶ್ರೀರಾಮುಲು ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಬರ್ತಾರೆ ಅಂತ ಇತ್ತು. ಒಬ್ಬರನ್ನ ತುಳಿದು ರಾಜಕೀಯ ಮಾಡೋದು ಕಾಂಗ್ರೆಸ್ ನಲ್ಲಿ ಇಲ್ಲ. ಇದು ನಡೆಯೋದು ಬಿಜೆಪಿಯಲ್ಲಿ ಮಾತ್ರ ಎಂದಿದ್ದಾರೆ.
ಜನಾರ್ದನ ರೆಡ್ಡಿಗೆ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳೋಕೆ ಹೇಳಿ. ಮೊದಲು ಯತ್ನಾಳ್, ಜಾರಕಿಹೊಳಿಯನ್ನು ಸರಿ ಮಾಡಿ, ಅಮೇಲೆ ಮಾತಾಡಲಿ. ನಿತ್ಯ ವಿಜಯೇಂದ್ರ ಬಗ್ಗೆ ಮಾತಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ಬಿಜೆಪಿ ಹೈಕಮಾಂಡ್‌ಗೆ ಆಗಿಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಅಲ್ಲದೇ ಎಐಸಿಸಿ ಭದ್ರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ನಾವು ಸುಮ್ಮನೆ ಇದ್ದೇವೆ. ಮೊದಲು ಬಿಜೆಪಿ ತಟ್ಟೆ ಸರಿ ಮಾಡಿಕೊಳ್ಳಲಿ. ಅಮೇಲೆ ನಮ್ಮ ತಟ್ಟೆಗೆ ಬನ್ನಿ ಎಂದು ಕಿಡಿಕಾರಿದ್ದಾರೆ.
ಜನಾರ್ದನ ರೆಡ್ಡಿ ಯಾಕೆ ಹೀಗೆ ಮಾತಾಡಿದ್ರೋ ಗೊತ್ತಿಲ್ಲ. ಲೋಕಸಭೆ ಉಪ ಚುನಾವಣೆ ಸಮಯದಲ್ಲಿ ಅನೇಕರು ಕಾಂಗ್ರೆಸ್‌ಗೆ ಬರ್ತಾರೆ ಎಂಬ ಸುದ್ದಿ ಇತ್ತು. ಆದಾದ ಮೇಲೆ 3 ಉಪ ಚುನಾವಣೆ ಗೆದ್ದ ಬಳಿಕ ಅನೇಕ ಬಿಜೆಪಿ, ಜೆಡಿಎಸ್ ಸಾಕಷ್ಟು ಜನ ಬರೋದಕ್ಕೆ ಸಿದ್ಧರಿದ್ದಾರೆ. ಯಾರನ್ನ ಸೇರಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಯಾರ ಅವಶ್ಯಕತೆ ಇಲ್ಲ, 136 ಶಾಸಕರು ಇದ್ದೇವೆ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಹೈಕಮಾಂಡ್, ಸಿಎಂ, ಡಿಸಿಎಂ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.