ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲಾ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ತಾಯಿ ಸೇರಿದಂತೆ ಹಾಗೂ ಬೇರೆಯವರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವರು ಈ ಪೋಸ್ಟ್ ಗೆ “ಅನುಷ್ಕಾ ಶೆಟ್ಟಿಯವರೆ ನಿಮ್ಮ ಕನ್ನಡ ಪ್ರೇಮ ಕಂಡು ಸಂತೋಷವಾಯಿತು. ಪರಭಾಷೆಯಲ್ಲಿ ಅತ್ಯಂತ ಬೇಡಿಕೆ ನಟಿ ನೀವು. ನಾನು ಅಂದುಕೊಂಡಿದ್ದೆ ನೀವು ಕನ್ನಡ ಮರಿಯುತ್ತಿದ್ದಿರಾ ಎಂದು ಆದರೆ ಅದನ್ನು ನೀವು ಸುಳ್ಳಾಗಿಸಿದಿರಿ. ನಿಮ್ಮ ಕನ್ನಡ ಪ್ರೇಮ ಕಂಡು ನಿಮ್ಮ ಬಗ್ಗೆ ನನಗೆ ಗೌರವ ಉಂಟಾಗಿದೆ. ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು. ಹಾಗೆಯೇ ನನ್ನ ಕಡೆಯಿಂದ ನಿಮ್ಮ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು, “ಈ ಒಂದು ಪೋಸ್ಟ್ ನಿಂದ ನೀವು ಕೋಟ್ಯಂತರ ಕನ್ನಡಿಗರ ಅಭಿಮಾನ ಗೆದ್ದುಬಿಟ್ಟಿರಿ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ತನ್ನ ತಾಯಿಗೆ ತನ್ನ ಮಾತೃ ಭಾಷೆ ಮೂಲಕ ಶುಭಾಶಯ ಕೋರಿದ ಕನ್ನಡತಿ ಅನುಷ್ಕಾ ಶೆಟ್ಟಿ ಅವರಿಗೆ ಧನ್ಯವಾದಗಳು. ನೀವು ಮನಸ್ಸು ಮಾಡಿದರೆ ನಿಮಗೆ ಅಪಾರ ಯಶಸ್ಸು, ಜನಪ್ರಿಯತೆ ತಂದು ಕೊಟ್ಟ ತೆಲುಗು ಭಾಷೆಯಲ್ಲಿ ಶುಭಾಶಯ ಹೇಳಬಹುದಿತ್ತು. ಆದರೆ ನೀವು ನಿಮ್ಮ ತಾಯ್ನಾಡು ಹಾಗೂ ತಾಯ್ನುಡಿಯನ್ನು ಮರೆಯಲಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಭಿಮಾನಿಯೊಬ್ಬರು ಅನುಷ್ಕಾರಿಗೆ ಕನ್ನಡ ಸಿನಿಮಾದಲ್ಲಿ ನೀವು ನಟಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಈ ವೇಳೆ ಅನುಷ್ಕಾ ಶೆಟ್ಟಿ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದು ಕನ್ನಡದಲ್ಲಿ ಉತ್ತರಿಸಿದ್ದರು. ಮೂಲತಃ ಕನ್ನಡ ಕರಾವಳಿಯ ಹುಡುಗಿಯಾಗಿರುವ ಅನುಷ್ಕಾ ಬೆಂಗಳೂರು ಮಹಾನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ.