ಮುಂಬೈ: ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿ ಅಭಿನಯದ ಟಾಲಿವುಡ್‍ನ ಬಹುನಿರೀಕ್ಷಿತ ಚಿತ್ರ `ಭಾಗಮತಿ’ ಯ ಟೀಸರ್ ರಿಲೀಸ್ ಆಗಿತ್ತು. ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಭಾಗಮತಿ ಚಿತ್ರದಲ್ಲಿ ಅನುಷ್ಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು, ಥ್ರಿಲ್ಲರ್ ಹಾರರ್ ಹೂರಣವಿದೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಶೇಡ್‍ಗಳಲ್ಲಿ ಕಂಗೊಳಿಸಿದ್ದಾರೆ.
ಸಿನಿಮಾದ ಮೊದಲಾರ್ಧದಲ್ಲಿ ಅನುಷ್ಕಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾಗೆ ನಾಯಕನಾಗಿ ಉನ್ನಿ ಮುಕುಂದನ್ ಅಭಿನಯಿಸಿದ್ದಾರೆ. ಇನ್ನು ಉಳಿರ್ಧದಲ್ಲಿ ಸಸ್ಪೆನ್ಸ್ ಮತ್ತು ಹಾರರ್ ಇದ್ದು, ಅನುಷ್ಕಾ ಅಭಿನಯದ ಅರುಂಧತಿ ಸಿನಿಮಾದ ಛಾಯೆಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.
ಭಾಗಮತಿ ಚಿತ್ರದಲ್ಲಿ ಅನುಷ್ಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಆಶಾ ಶರತ್, ಉನ್ನಿ ಮುಕುಂದನ್ ಮುಂತಾದವರು ಅಭಿನಯಿಸಿದ್ದಾರೆ. `ಬಾಹುಬಲಿ’ ಚಿತ್ರದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ರಾಣಿ ಭಾಗಮತಿ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತೆ. ಚಿತ್ರದ ಟ್ರೇಲರ್ ತುಂಬಾ ಕುತೂಹಲವನ್ನು ಮೂಡಿಸುತ್ತಿದ್ದು, ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೇಶದಲ್ಲೇ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು. ಭಾಗಮತಿ ಸಿನಿಮಾ ಇದೇ 26 ರಂದು ಬಿಡುಗಡೆಯಾಗಲಿದೆ.
`ಭಾಗಮತಿ’ ಸಿನಿಮಾದ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಭಾಸ್ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿ ಸ್ವೀಟಿ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದರು. “ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡಿದ್ದರು.