ಮುಂಬೈ: ಬಾಲಿವುಡ್ ಚಿತ್ರರಂಗದಿಂದ ದೂರ ಇರುವುದು ಏಕೆ ಎನ್ನುವುದರ ಬಗ್ಗೆ ನಟಿ ಅನುಷ್ಕಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ಶರ್ಮಾ, “ನಟಿಯಾಗಿ ಏನು ಸಾಧನೆ ಮಾಡಬೇಕಿತ್ತೋ ಆ ಸಾಧನೆ ಮಾಡಿದ್ದೇನೆ. ವೃತ್ತಿ ಜೀವನದಲ್ಲಿ ನಾನು ಈಗ ಭದ್ರತೆಯ ಸ್ಥಾನ ತಲುಪಿದ್ದೇನೆ. ಬ್ಯುಸಿಯಾಗಿ ಇರಬೇಕು ಎನ್ನುವ ಒಂದೇ ಕಾರಣಕ್ಕೆ ನಾನು ಈಗ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ” ಎಂದು ಹೇಳಿದ್ದಾರೆ.
ನಾನು ಕಳೆದ ಮೂರು ವರ್ಷದಲ್ಲಿ ಫ್ಯಾಶನ್ ಕೆಲಸ ಮಾಡುತ್ತಿದ್ದೇನೆ. ಆ ಕೆಲಸದ ವೇಳೆ ನನಗೆ ಸಾಕಷ್ಟು ಒತ್ತಡ ಇರುತ್ತಿತ್ತು. ನಾನು ತುಂಬಾ ಬೇಡಿಕೆ ಇರುವ ಪಾತ್ರಗಳನ್ನು ಮಾಡಿದ್ದೇನೆ. ಒಂದು ವರ್ಷದಲ್ಲಿ ನಾನು ‘ಪರಿ’, ‘ಸೂಯಿ ಧಾಗಾ’ ಹಾಗೂ ‘ಝೀರೋ’ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಮೂರು ಚಿತ್ರಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯ ಇರಲಿಲ್ಲ. ಈ ಸಿನಿಮಾಗಳಿಗಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ಎಂದು ಅನುಷ್ಕಾ ಹೇಳಿದ್ದಾರೆ.
ಈಗ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಶೋ ಮಾಡಬೇಕು ಎಂದುಕೊಂಡಿದ್ದೇನೆ. ಒಂದು ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ಈ ಕೆಲಸಗಳಿಗಾಗಿ ನನಗೆ ಸಮಯದ ಅವಶ್ಯಕತೆ ಇದೆ. ಇದು ನನಗೆ ತುಂಬಾ ಹೊಸದು. ನಾವು ಬೆಳ್ಳಿಪರದೆ ಹಿಂದೆ ಮಾಡುವ ಕೆಲಸ ಜನರಿಗೆ ಗೊತ್ತಾಗುವುದಿಲ್ಲ. ನಾನು ಈಗ ನನ್ನ ಕೆಲಸದ ಕಡೆ ಗಮನ ಕೊಡಲು ನಿರ್ಧರಿಸಿದ್ದೇನೆ. ನಾನು ಮಾಡುವ ಕೆಲಸದಲ್ಲಿ ನನಗೆ ತೃಪ್ತಿ ಇದೆ ಎಂದಿದ್ದಾರೆ.
ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್ಶಾ ಶಾರೂಕ್ ಖಾನ್ ನಟಿಸಿದ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಈ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಕೂಡ ಅಭಿನಯಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ.