ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಅನುರಾಗ್ ಕಶ್ಯಪ್(Anurag Kashyap) ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. 8 ಹೆಸರಿನ ಈ ಸಿನಿಮಾದ ಗ್ಲಿಂಪ್ಸ್ (Glimpse) ಚಿತ್ರದ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ(Arvind Venkatesh Reddy) ಅವರ ಜನ್ಮದಿನದ ವಿಶೇಷ ಅಂಗವಾಗಿ ಬಿಡುಗಡೆಯಾಗಿದೆ.
ಎವಿಆರ್ ಎಂಟರ್‌ಟೈನ್ಮೆಂಟ್ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಸಿನಿಮಾದ ‘8’ ವಿಶೇಷ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀವನದಲ್ಲಿ ದೊರೆಯುವ ಎರಡನೇ ಅವಕಾಶ ಎಂಬ ಗಂಭೀರವಾದ ವಿಷಯವನ್ನು ಚಿತ್ರದ ಕಥಾವಸ್ತು.
ಆ ಅಪರೂಪದ ಅವಕಾಶವನ್ನು ಒಬ್ಬ ವ್ಯಕ್ತಿ ತನ್ನ ಜೀವನವನ್ನು ಮರುನಿರ್ಮಿಸಲು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರವು ಹೃದಯಸ್ಪರ್ಶಿಯಾಗಿ ಅನಾವರಣಗೊಳಿಸುತ್ತದೆ. ಸಿನಿಮಾದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ. ಈ ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಅವರ ಅದ್ಭುತ ಛಾಯಾಗ್ರಹಣ ಹಾಗೂ ಪ್ರತಿಕ್ ಶೆಟ್ಟಿ ಅವರ ಸಂಕಲನ ವಿಶೇಷ ಮೆರುಗು ನೀಡಿವೆ.
ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಜನ್ಮದಿನದ ಸಂಭ್ರಮದ ಅಂಗವಾಗಿ ಬಿಡುಗಡೆಗೊಂಡಿರುವ ಈ ವಿಶೇಷ ಗ್ಲಿಂಪ್ಸ್ ಇದೀಗ ಚಿತ್ರದ ಎಲ್ಲಾ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
