ಬ್ರೆಸಿಲಿಯಾ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬ್ರೆಜಿಲ್(Brazil) ಅಧ್ಯಕ್ಷೀಯ ಚುನಾವಣೆಯ ಮರು ಮತದಾನ ಫಲಿತಾಂಶದಲ್ಲಿ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ(Luiz Inacio Lula da Silva) ಅವರು ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಅಧ್ಯಕ್ಷರಾಗಿ ಮರುಆಯ್ಕೆಯಾಗಿದ್ದಾರೆ.
ಶೇ.96ಕ್ಕೂ ಹೆಚ್ಚು ಮತಗಳ ಎಣಿಕೆ ಪೂರ್ಣಗೊಂಡ ಅಧಿಕೃತ ಫಲಿತಾಂಶಗಳ ಪ್ರಕಾರ, ಲುಲಾ ಅವರು ಶೇ. 51ಕ್ಕೂ ಅಧಿಕ ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎದುರಾಳಿ, ಬಲಪಂಥೀಯ ಸೆನೆಟರ್ ಫ್ಲಾವಿಯೊ ಬೋಲ್ಸನಾರೊ ಶೇ. 48ಕ್ಕೂ ಹೆಚ್ಚು ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
45 ವರ್ಷದ ಫ್ಲಾವಿಯೊ ಬೋಲ್ಸನಾರೊ ಅವರನ್ನು ಸೋಲಿಸುವ ಮೂಲಕ ಲುಲಾ ಅವರು ಬಲಪಂಥೀಯ ರಾಜಕೀಯ ಪ್ರಾಬಲ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಿಕಟ ಬಾಂಧವ್ಯ ಬೆಳೆಸುವುದಾಗಿ ಭರವಸೆ ನೀಡಿದ್ದ ಬೋಲ್ಸನಾರೊ ಕುಟುಂಬದ ರಾಜಕೀಯ ಹಿಡಿತವನ್ನು ಹಿಮ್ಮೆಟ್ಟಿಸಿರುವ ಲುಲಾ, ಈ ಗೆಲುವಿನೊಂದಿಗೆ ತಮ್ಮ ದೀರ್ಘಕಾಲದ ರಾಜಕೀಯ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ.
ಚುನಾವಣಾ ದಿನದಂದು ಹಲವು ಗೊಂದಲಗಳು ಉಂಟಾದವು. ಮತದಾರರು ಮತಗಟ್ಟೆಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಸೌಲಭ್ಯಗಳನ್ನು ಕೆಲವು ಸ್ಥಳೀಯ ಆಡಳಿತಗಳು ಕಡಿತಗೊಳಿಸಿವೆ ಎಂದು ಆರೋಪಿಸಿ ಲುಲಾ ಅವರ ಪ್ರಚಾರ ತಂಡ ಮತದಾನದ ಅವಧಿಯನ್ನು ವಿಸ್ತರಿಸುವಂತೆ ಕೋರಿತು. ಮತ್ತೊಂದೆಡೆ ಕೆಲವು ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯ ನೆಪವೊಡ್ಡಿ ಬೋಲ್ಸನಾರೊ ಬಣವೂ ಸಮಯ ವಿಸ್ತರಣೆಗೆ ಮನವಿ ಮಾಡಿತು.
ಅಂತಿಮವಾಗಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕ್ರಿಸ್ಟಿಯಾನೊ ಝಾನಿನ್, ಮತದಾನದ ಸಮಯವನ್ನು ಸಂಜೆ 5 ಗಂಟೆಯ ನಂತರವೂ ಎರಡು ಗಂಟೆಗಳ ಕಾಲ ವಿಸ್ತರಿಸಿ ಆದೇಶಿಸಿದರು. ಆದರೆ ಈ ಆದೇಶ ತಲುಪುವಷ್ಟರಲ್ಲಿ ಹಲವು ಮತಗಟ್ಟೆಗಳಲ್ಲಿ ಸಿಬ್ಬಂದಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿಷ್ಕ್ರಿಯಗೊಳಿಸಿದ್ದರಿಂದ, ಆ ಕೇಂದ್ರಗಳಲ್ಲಿ ಮತದಾನವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಇದು ಹಲವು ಮತದಾರರ ಆಕ್ರೋಶಕ್ಕೆ ಕಾರಣವಾಯಿತು.
ಲ್ಯಾಟಿನ್ ಅಮೆರಿಕದಲ್ಲಿ ಬೆಳೆಯುತ್ತಿರುವ ಬಲಪಂಥೀಯ ಚಳವಳಿ, ಅಮೆಜಾನ್ ಮಳೆಕಾಡುಗಳ ಭವಿಷ್ಯ ಮತ್ತು ಬ್ರೆಜಿಲ್ನ ನಾಲ್ಕು ದಶಕಗಳ ಹಳೆಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ಚುನಾವಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.
ಪರಾಜಿತ ಅಭ್ಯರ್ಥಿ ಫ್ಲಾವಿಯೊ ಬೋಲ್ಸನಾರೊ ಅವರು ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಪುತ್ರರಾಗಿದ್ದಾರೆ. ಜೈರ್ ಬೋಲ್ಸನಾರೊ ಅವರು 2022ರಲ್ಲಿ ಲುಲಾ ವಿರುದ್ಧ ಸೋತ ನಂತರ ಕ್ಷಿಪ್ರಕ್ರಾಂತಿಯ ಸಂಚು ರೂಪಿಸಿದ ಆರೋಪದಡಿ ಪ್ರಸ್ತುತ 27 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಗೆದ್ದರೆ ತಂದೆಗೆ ಕ್ಷಮಾದಾನ ನೀಡುವುದಾಗಿ ಫ್ಲಾವಿಯೊ ಭರವಸೆ ನೀಡಿದ್ದರು.
ಅಕ್ಟೋಬರ್ 4ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಫ್ಲಾವಿಯೊ ಮುನ್ನಡೆ ಸಾಧಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಲುಲಾ ಅವರು ಭರ್ಜರಿ ಕಂಬ್ಯಾಕ್ ಮಾಡಿ ಐತಿಹಾಸಿಕ ಜಯ ದಾಖಲಿಸಿದ್ದಾರೆ. 80 ವರ್ಷದ ಲುಲಾ ಅವರು ಈ ಹಿಂದೆ 2003 ರಿಂದ 2010 ರವರೆಗೆ ಎರಡು ಅವಧಿಗೆ ಮತ್ತು 2023 ರಿಂದ ಪ್ರಸ್ತುತ ಅವಧಿಯವರೆಗೆ ಬ್ರೆಜಿಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹೊಸ ಗೆಲುವಿನೊಂದಿಗೆ ಅವರು ಒಟ್ಟು 16 ವರ್ಷಗಳ ಕಾಲ ಅಧಿಕಾರ ನಡೆಸಿದಂತಾಗುತ್ತದೆ. ಲುಲಾ ಡಾ ಸಿಲ್ವಾ ಅವರು ಜನವರಿ 5, 2027 ರಂದು ಅಧಿಕೃತವಾಗಿ ತಮ್ಮ ಹೊಸ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
