ಬೆಂಗಳೂರು: ಸ್ವಂತ ಅಕ್ಕನ ಮನೆ ಸೇರಿದಂತೆ ವಿವಿಧ ಮನೆಗಳಲ್ಲಿ ಕಳ್ಳತನ ಮಾಡಿದ್ದ 47 ವರ್ಷದ ಖತರ್ನಾಕ್ ಮಹಿಳೆಯ ತಂಡವನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಟ ಮಟ ಮಧ್ಯಾಹ್ನವೇ ಪ್ರಭಾವತಿ ಮನೆಗೆ ನುಗ್ಗಿ, ಪ್ರಭಾವತಿ ಹಾಗೂ ತಾಯಿಯ ಬಾಯಿ, ಕೈ ಕಾಲು ಕಟ್ಟಿಹಾಕಿ, ಚಿನ್ನಾಭರಣಗಳನ್ನು ಕದ್ದು ಆಂಟಿ ಗಿರಿಜಮ್ಮ(47) ಹಾಗೂ ತಂಡ ಆಟೋ ಏರಿ ಪರಾರಿಯಾಗಿತ್ತು. ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದು, ರಾಜು ಅಲಿಯಾಸ್ ಸ್ಟಿಫನ್ ರಾಜು(51), ರಘುವರನ್ ಅಲಿಯಾಸ್ ರಘು(30), ಸುರೇಶ್(36), ಲಿಂಗರಾಜು(34), ಸ್ಟಿಫನ್ ರಾಜ್(25), ಮಣಿಕಂಠನ್(25), ರಾಜೇಶ್(21), ಸತೀಶ್(20), ಅಬ್ದುಲ್ ಸಮ್ಮದ್(29), ಸತೀಶ್ ಕುಮಾರ್(24) ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಟ ಆಟೋರಿಕ್ಷಾ, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಗಂಡಸರಿಲ್ಲದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ತಂಡ, ಕಳ್ಳತನ ಮಾಡುವ ಮನೆಯವರ ಜೊತೆ ಸಲುಗೆಯಿಂದ, ಪ್ರೀತಿಯಿಂದ ವರ್ತಿಸಲು ಗಿರಿಜಮ್ಮನನ್ನು ಬಿಡುತ್ತಿದ್ದರು. ಬಳಿಕ ಅವರ ಮನೆಯನ್ನೇ ಗಿರಿಜಮ್ಮ ಟಾರ್ಗೆಟ್ ಮಾಡುತ್ತಿದ್ದಳು. ಇದೇ ರೀತಿ ಈ ಗ್ಯಾಂಗ್ ಆಗಸ್ಟ್ 22ರ ಮಧ್ಯಾಹ್ನ ಪ್ರಭಾವತಿ ಅವರ ಮನೆಯನ್ನು ಟಾರ್ಗೆಟ್ ಮಾಡಿತ್ತು. ಪ್ರಭಾವತಿ ತನ್ನ ತಾಯಿ ಜೊತೆ ಟೈಲರ್ ವೃತ್ತಿ ಮಾಡಿಕೊಂಡು ವಾಸವಾಗಿದ್ದರು. ಪ್ರಭಾವತಿ ಬಳಿ ಚಿನ್ನಾಭರಣ ಇರುವ ವಿಚಾರ ತಿಳಿದಿದ್ದ ಗಿರಿಜಮ್ಮ, ಈ ವಿಚಾರವನ್ನು ಸ್ಟಿಫನ್ ರಾಜುಗೆ ತಿಳಿಸಿದ್ದಳು. ವಿಷಯ ತಿಳಿಯುತ್ತಿದ್ದಂತೆ ಸ್ಟಿಫನ್ ರಾಜು ಬೆಂಗಳೂರು ಹಾಗೂ ತಮಿಳುನಾಡಿನ ತನ್ನ ಗ್ಯಾಂಗ್ ಜೊತೆ ರಾಬರಿಗೆ ಸಿದ್ದನಾಗಿದ್ದ.
ತಂಡವನ್ನು ಕರೆ ತಂದು ಮನೆಯ 200 ಮೀಟರ್ ದೂರದಲ್ಲಿ ಇರಿಸಿದ್ದ. ನಂತರ ಎಲ್ಲರನ್ನು ಅಲರ್ಟ್ ಮಾಡಿಸಿದ್ದ. ಮನೆಯ ಬಳಿ ಯಾರಾದ್ರೂ ಓಡಾಡುತ್ತಾರಾ ಎನ್ನುವುದನ್ನು ವೀಕ್ಷಿಸಲು ಗ್ಯಾಂಗ್ ರೆಡಿಯಾಗಿತ್ತು. ಸಿಗ್ನಲ್‍ಗಳ ನೀಡಿದ ಬಳಿಕ ಮೂರು ಜನರ ಗ್ಯಾಂಗ್ ಪ್ರಭಾವತಿ ಮನೆಯ ಬಳಿ ಹೊರಟಿದೆ. ಮಧ್ಯಾಹ್ನದ ವೇಳೆ ಪ್ರಭಾವತಿ ಮನೆಗೆ ನುಗ್ಗಿ, ಪ್ರಭಾವತಿ ಹಾಗೂ ಅವರ ತಾಯಿಯ ಬಾಯಿ ಕೈ, ಕಾಲು ಕಟ್ಟಿ ಹಾಕಿ ಚಿನ್ನಾಭರಣ ಕದ್ದು, ನಂತರ ಆಟೋ ಹತ್ತಿ ಎಸ್ಕೇಪ್ ಆಗಿದೆ.
ಪ್ರಕರಣದ ನಂತರ ಆರೋಪಿಗಳ ತಂಡ ತಮಿಳುನಾಡಿಗೆ ಹೋಗಿ ಅಡಗಿಕೊಂಡಿತ್ತು. ಆರೋಪಿಗಳ ಚಲನವಲನಗಳ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಇದನ್ನಾಧರಿಸಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸುಬ್ರಮಣ್ಯಪುರ ಎಸಿಪಿ ಮಹದೇವ್ ಹಾಗೂ ಕೋಣನಕುಂಟೆ ಇನ್ಸ್ ಪೆಕ್ಟರ್ ಧರ್ಮೇಂದ್ರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳ ಬಂಧನದ ಬಳಿಕ ಪ್ರಕರಣದ ಮಾಸ್ಟರ್ ಮೈಂಡ್ ಗಿರಿಜಮ್ಮ ಎನ್ನುವುದು ತಿಳಿದು ಬಂದಿದೆ. ಈ ಹಿಂದೆ ಇದೆ ರೀತಿ ಕಾಡುಗೋಡಿಯ ತನ್ನ ಅಕ್ಕನ ಮನೆಯಲ್ಲೇ ಗಿರಿಜಮ್ಮ ಕಳ್ಳತನ ಮಾಡಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ 400 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.