ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧದ, ಗದ್ದಲದ ನಡುವೆಯೂ ಮಂಗಳವಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಗಳವಾರ ಮಂಡಿಸಲಾಯಿತು. ಭೋಜನ ನಂತರ ಕಲಾಪದ ಬಳಿಕ ವಿಧೇಯಕವನ್ನು ದಿಢೀರ್ ವಿಧೇಯಕ ಮಂಡಿಸಲಾಗಿದೆ.
ಕಾಂಗ್ರೆಸ್ ವಿರೋಧಿಸುತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಸೂದೆ ಮಂಡಿಸಲು ಮುಂದಾದರು. ಈ ವೇಳೆ ಮಸೂದೆ ಮಂಡನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು-2021 ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಹೆಚ್ಚುವರಿ ಕಾರ್ಯಸೂಚಿಯಲ್ಲಿ ಮಸೂದೆ ಮಂಡನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಚರ್ಚೆ ಮಾಡಿ ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಚರ್ಚೆ ಮಾಡಿ ಮೊದಲು ಎಂದು ಮನವಿ ಮಾಡಿದರು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕದ್ದು ಮುಚ್ಚಿ ಮಸೂದೆ ಯಾಕೆ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಶಿವಕುಮಾರ್ ಮಾತು ವಾಪಸ್ ತೆಗೆದುಕೊಳ್ಳಬೇಕು. ಕದ್ದುಮುಚ್ಚಿ ಮಾಡಿಲ್ಲ, ಅಜೆಂಡಾದಲ್ಲಿ ತಂದೇ ಮಾಡಿರುವುದು ಎಂದ ಸ್ಪೀಕರ್ ಪ್ರತ್ಯುತ್ತರ ನೀಡಿದರು. ಆಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತು. ಸರ್ಕಾರ ಕಳ್ಳತನದಿಂದ ಮಸೂದೆ ಮಂಡನೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಶೇಮ್ ಶೇಮ್ ಎಂದು ಕಾಂಗ್ರೆಸ್ ಸದಸ್ಯರ ಗದ್ದಲ ಸೃಷ್ಟಿಸಿದರು.
ನಿನ್ನೆ ಮಸೂದೆ ಮುದ್ರಣ ಆಗಿರಲಿಲ್ಲ, ಅದಕ್ಕೆ ನಿನ್ನೆ ಅಜೆಂಡಾದಲ್ಲಿ ಸೇರಿಸಿರಲಿಲ್ಲ. ಇವತ್ತು ಮುದ್ರಣ ಆಗಿ ತಂದರು. ಇವತ್ತೇ ಮಾಡಿ ಅಂತಾ ಸರ್ಕಾರ ಹೇಳಿದ ಮೇಲೆ ಹೆಚ್ಚುವರಿ ಅಜೆಂಡಾದಲ್ಲಿ ಸೇರಿಸಿದ್ದು. ಕದ್ದುಮುಚ್ಚಿ ಮಾಡಿಲ್ಲ, ಚರ್ಚೆ ಮಾಡಿ. ಕಾನೂನಿನ ಪ್ರಕಾರವೇ ಮಸೂದೆ ಮಂಡನೆಗೆ ಅವಕಾಶ ಕೊಡಲಾಗಿದೆ. ನಾಳೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸ್ಪೀಕರ್ ತಿಳಿಸಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಇದೊಂದು ಕೆಟ್ಟ ಸರ್ಕಾರ, ವಿಧಾನಸಭೆ ನಡೆಸೋದು ಹೀಗೆನಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ
ಈ ವೇಳೆ ವಿಧಾನಸಭೆಯಲ್ಲಿ ಅತಿವೃಷ್ಟಿ ಹಾನಿ ಬಗ್ಗೆ ನಡೆದ ಚರ್ಚೆಗೆ ಸರ್ಕಾರದ ಉತ್ತರ ಕೊಡಲು ಸ್ಪೀಕರ್ ಸೂಚನೆ ನೀಡಿದರು. ಉತ್ತರ ಕೊಡಲು ಕಂದಾನ ಸಚಿವ ಅಶೋಕ್ ಎದ್ದು ನಿಂತಾಗ, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಈ ಬಿಲ್ ಅಷ್ಟು ಅರ್ಜೆಂಟ್ ಇತ್ತಾ ಎಂದು ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್ ಮಸೂದೆ ಪ್ರತಿಯನ್ನು ಹರಿದು ಹಾಕಿದರು. ಡಿಕೆಶಿ ನೀವು ಹಿರಿಯ ಶಾಸಕರು, ಬಿಲ್ ಹರಿದು ಹಾಕಿದ್ದು ಸರಿಯಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ
ಮಸೂದೆಗೆ ಜೆಡಿಎಸ್ ನಿಂದಲೂ ವಿರೋಧ ವ್ಯಕ್ತವಾಯಿತು. ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.
ಮತಾಂತರ ನಿಷೇಧ ವಿಧೇಯಕದಲ್ಲಿ ಇರುವ ಪ್ರಮುಖ ಅಂಶಗಳೇನು?
* ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.
* ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ
* ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.
* ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ.
* ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.
* ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.
* ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.
* ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.
ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಿದೆ ನಿಯಮಾವಳಿಗಳು!
* ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.
* ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.
* ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
* ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
* ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
* ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.