ಕೊಪ್ಪಳ: ತಮ್ಮ ಎರಡನೇ ಮದುವೆ ಬಗ್ಗೆ ಪ್ರಶ್ನಿಸಿದ್ದ ವಿರೋಧ ಪಕ್ಷದ ನಾಯಕರು ಮತ್ತು ಮಾಧ್ಯಮಗಳಿಗೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ನಾನು ಹರಾಮ್ ಮಾಡಿಲ್ಲ. ನಮ್ಮ ಧರ್ಮದಲ್ಲಿ ಎರಡನೇ ಮದುವೆಗೆ ಅವಕಾಶ ಇದ್ದು, ಗಂಡಸ್ತನದ ಕೆಲಸ ಮಾಡಿದ್ದೇನೆ ಎಂದಿದ್ದರು.
ಇದೀಗ ಆ ಶಾಸಕರಿಗೆ ಸ್ವತಃ ಅವರ ಸಹೋದರರೇ ಟಾಂಗ್ ನೀಡಿದ್ದು, ಗಂಡಸ್ತನದ ಬಗ್ಗೆ ಮಾತಾಡಿದ್ದ ಶಾಸಕನ ಅಸಲಿ ಬಣ್ಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಗಂಡಸ್ತನದ ಬಗ್ಗೆ ಮಾತನಾಡುವ ನಮ್ಮ ಅಣ್ಣ ಶಾಸಕ ಇಕ್ಬಾಲ್ ಅನ್ಸಾರಿ ಕಿರುತೆರೆ ನಟಿ ಪಂಚಮಿಯನ್ನು ಅಸಲಿಗೆ ಮದುವೆಯೇ ಆಗಿಲ್ಲ ಅಂತಾ ದಾಖಲಾತಿ ಬಿಡುಗಡೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಪಂಚಮಿ ಶಾಸಕರ ಪರವಾಗಿ ಪ್ರಚಾರ ಕೈಗೊಂಡಿದ್ದರು. ಪಂಚಮಿ ಮತ್ತು ಅನ್ಸಾರಿ ನಡುವಿನ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತು. ಆದರೆ ದಾಖಲಾತಿಯಲ್ಲಿ ಅವರ ಹೆಸರು ಇನ್ನೂ ಪಂಚಮಿ ತಂದೆ ಗುರುಸ್ವಾಮಿ ಅಂತಾ ಇದೆ. ಕಿರುತೆರೆ ನಟಿ ಪಂಚಮಿಯನ್ನು ನೀವು ಮದುವೆ ಆಗಿದ್ದರೆ. ಯಾಕೆ ನೀವು 2ನೇ ಪತ್ನಿ ಎಂದು ಒಪ್ಪಿಕೊಳ್ಳುತ್ತಿಲ್ಲಾ? ಎಂದು ಸವಾಲು ಹಾಕಿದ್ದಾರೆ. ನೀವು ಮದುವೆಯಾಗದೇ ಆಕೆ ಜೊತೆ ಇದ್ದರೆ ಅದು ಹರಾಮ್ ಅಲ್ಲದೇ ಮತ್ತೇನು ಎಂದು ಟೀಕಿಸಿದ್ದಾರೆ.
ನಮ್ಮ ತಾಯಿಗೆ ಬೆದರಿಕೆ ಹಾಕಿ, ತಲೆಗೆ ಚಾಕು, ಗನ್ ಇಟ್ಟು ತಮ್ಮ ಪರ ಹೇಳಿಕೆ ಹೇಳಿಸುತ್ತಾರೆ ಅಂತಾ ಸಹೋದರರು ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಸಹೋದರರಾದ ಅಜಾದ್ ಅನ್ಸಾರಿ ಮತ್ತು ಅಮ್ಜದ್ ಅನ್ಸಾರಿ ದಾಖಲೆ ಸಮೇತ ಅವರ ಅಣ್ಣನ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ನಮ್ಮ ಮನೆತನದ ಮಾನ ಮಾರ್ಯಾದೆಯನ್ನು ಹಾಗೂ ನಮ್ಮ ತಂದೆ ಎಂ.ಎಸ್.ಅನ್ಸಾರಿಯವರ ಹೆಸರನ್ನು ಬೀದಿಪಾಲು ಮಾಡಿದ್ದಾರೆ ಎಂದು ಅಣ್ಣ ಇಕ್ಬಾಲ್ ಅನ್ಸಾರಿ ವಿರುದ್ಧ ಹರಿಹಾಯ್ದಿದ್ದಾರೆ.