ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ

Public TV
1 Min Read
police jeep

ವಾಷಿಂಗ್ಟನ್: ಅಮೆರಿಕದಲ್ಲಿ (America) ಭಾರತೀಯ ವಿದ್ಯಾರ್ಥಿಗಳ (Indian Student) ಅನುಮಾನಾಸ್ಪದ ಸಾವಿನ ಸರಣಿ ಮುಂದುವರೆದಿದ್ದು, ಓಹಿಯೋದ ಕ್ಲೀವ್‍ಲ್ಯಾಂಡ್ ಎಂಬಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನ್ಯೂಯಾರ್ಕ್‍ನಲ್ಲಿರುವ (New York) ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಉಮಾ ಸತ್ಯ ಸಾಯಿ ಗಡ್ಡೆ ಎಂದು ಗುರುತಿಸಲಾಗಿದೆ. ಆಕೆ ಓಹಿಯೋದ ಕ್ಲೀವ್‍ಲ್ಯಾಂಡ್‍ನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ಸಾವಿನ ಬಗ್ಗೆ ಭಾರತೀಯ ದೂತವಾಸ ಕಚೇರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೃತಳ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೇ ಮೃತದೇಹವನ್ನು ಭಾರತಕ್ಕೆ ಸಾಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏಳೆಂಟು ದಿನದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್‌ ಸಿಂಗ್‌

ಈ ಘಟನೆಯು ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲಿನ ದಾಳಿಯ ಸರಣಿಯ ಮತ್ತೊಂದು ಹೆಜ್ಜೆಯಾಗಿದೆ. ಅಲ್ಲದೇ ಮಾರ್ಚ್‍ನಲ್ಲಿ ಮೊಹಮ್ಮದ್ ಅಬ್ದುಲ್ ಅರಾಫತ್, ನಿಗೂಢವಾಗಿ ಕ್ಲೀವ್‍ಲ್ಯಾಂಡ್ ಪ್ರದೇಶದಿಂದ ನಾಪತ್ತೆಯಾಗಿದ್ದರು. ನಂತರ ಆತನ ಕುಟುಂಬಕ್ಕೆ ಆತನ ಬಿಡುಗಡೆಗೆ ಹಣ ನೀಡುವಂತೆ ಸುಲಿಗೆ ಕರೆ ಬಂದಿತ್ತು.

ಈ ವರ್ಷದ ಆರಂಭದಲ್ಲಿ, ಹೈದರಾಬಾದ್‍ನ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಮೇಲೆ ಚಿಕಾಗೋದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು. ಬಳಿಕ ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ತಕ್ಷಣವೇ ಮಧ್ಯಪ್ರವೇಶಿಸಿ ಅಲಿ ಮತ್ತು ಅವರ ಕುಟುಂಬಕ್ಕೆ ನೆರವು ನೀಡಿತ್ತು. ಇದರೊಂದಿಗೆ ಇಂಡಿಯಾನಾದ ಪಡ್ರ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಸಾವು ಮತ್ತು ಜಾರ್ಜಿಯಾದಲ್ಲಿ ವಿವೇಕ್ ಸೈನಿಯ ಕ್ರೂರ ಹತ್ಯೆ ಸಹ ನಡೆದಿತ್ತು.

2024ರ ಆರಂಭದಿಂದ, ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ 10 ಸಾವುಗಳು ಸಂಭವಿಸಿವೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕೃತ – ನ್ಯಾಯಾಂಗ ತನಿಖೆಗೆ ಒತ್ತಾಯ

Share This Article