ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು (Hindu Man) ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ಕೊಲೆಯಾದ ವ್ಯಕ್ತಿ. ರಾಜಧಾನಿ ಢಾಕಾದಿಂದ ಸುಮಾರು ಮೂರೂವರೆ ಗಂಟೆಗಳ ದೂರದಲ್ಲಿರುವ ರಾಜ್ಬರಿಯ ಪಂಗ್ಶಾ ಉಪ ಜಿಲ್ಲೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಬುಲೆಟ್ ಪ್ರೂಫ್ ವಾಹನದಲ್ಲಿ ಢಾಕಾಗೆ ರೆಹಮಾನ್ ಎಂಟ್ರಿ; ಲಕ್ಷಾಂತರ ಜನರಿಂದ ಅದ್ದೂರಿ ಸ್ವಾಗತ
ಸಾಮ್ರಾಟ್ ‘ಸಾಮ್ರಾಟ್ ಬಹಿನಿ’ ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದು, ಇದು ಸುಲಿಗೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು. ಕಳೆದ ವರ್ಷ ಶೇಖ್ ಹಸೀನಾ ಪದಚ್ಯುತಗೊಂಡ ನಂತರ ಸಾಮ್ರಾಟ್ ದೇಶ ಬಿಟ್ಟು ಪಲಾಯನ ಮಾಡಿದ್ದ. ಇತ್ತೀಚೆಗೆ ಕಲಿಮೊಹೋರ್ ಒಕ್ಕೂಟದ ತನ್ನ ಗ್ರಾಮವಾದ ಹೊಸೆಂದಂಗಾಗೆ ಮರಳಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಸಾಮ್ರಾಟ್ ಮತ್ತು ಆತನ ಗ್ಯಾಂಗ್‌ನ ಇತರ ಕೆಲವು ಸದಸ್ಯರು ಶಾಹಿದುಲ್ ಇಸ್ಲಾಂ ಎಂಬ ಹಳ್ಳಿಗನ ಮನೆಯಲ್ಲಿ ಹಣ ಸುಲಿಗೆ ಮಾಡಲು ಹೋಗಿದ್ದರು. ಈ ವೇಳೆ ಗ್ರಾಮಸ್ಥರು ಸಾಮ್ರಾಟ್‌ನನ್ನು ಹಿಡಿದು ಥಳಿಸಿ ಕೊಂಡಿದ್ದಾರೆ. ಗ್ಯಾಂಗ್‌ನ ಇತರರು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪೊಲೀಸರು ಸಾಮ್ರಾಟ್‌ನನ್ನು ಜನರಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಆತ ಮೃತಪಟ್ಟಿದ್ದಾನೆಂದು ಘೋಷಿಸಲಾಯಿತು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಪಂಗ್ಶಾ ವೃತ್ತ) ದೇಬ್ರತಾ ಸರ್ಕಾರ್ ಹೇಳಿದ್ದಾರೆ. ಪಂಗ್ಶಾ ಪೊಲೀಸ್ ಠಾಣೆಯಲ್ಲಿ ಸಾಮ್ರಾಟ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಂದು ಕೊಲೆ ಪ್ರಕರಣವೂ ಸೇರಿದೆ ಎಂದು ಸರ್ಕಾರ್ ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶ ಬಿಕ್ಕಟ್ಟು ಮತ್ತಷ್ಟು ತೀವ್ರ – ಢಾಕಾದಲ್ಲಿ ಸ್ಫೋಟ; ಓರ್ವ ಸಾವು
ಕೆಲ ದಿನಗಳ ಹಿಂದಷ್ಟೇ ಹಿಂದೂ ಧರ್ಮದ ದೀಪು ಚಂದ್ರದಾಸ್ ಅವರ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ವಾತಾವರಣವು ಉದ್ವಿಗ್ನಗೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆಯಾಗಿದೆ. ಇದು ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

