– 2 ದಿನದಲ್ಲಿ ಇಬ್ಬರು ಪ್ಯಾರಾಗ್ಲೈಡರ್ ಸಾವು
ಶಿಮ್ಲಾ: ಪ್ಯಾರಾಗ್ಲೈಡರ್ (Paraglider) ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಪರಿಣಾಮ ಜೆಕ್‌ನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ (Himachal Pradesh) ಮನಾಲಿಯಲ್ಲಿ (Manali) ನಡೆದಿದೆ.
ಮೃತರನ್ನು ಡಿಟಾ ಮಿಸುರ್ಕೋವಾ (43) ಎಂದು ಗುರುತಿಸಲಾಗಿದೆ. ಅವರು ಹಾರಾಡುತ್ತಿದ್ದ ಪ್ಯಾರಾಗ್ಲೈಡರ್ ಮನಾಲಿಯ ಮರ್ಹಿ ಬಳಿ ಪರ್ವತಕ್ಕೆ ಅಪ್ಪಳಿಸಿತು. ಬಲವಾದ ಗಾಳಿಯಿಂದಾಗಿ ಅವರು ಗ್ಲೈಡರ್ ಮೇಲೆ ನಿಯಂತ್ರಣವನ್ನು ಕಳೆದುಕೊಂಡರು ಎಂದು ತಿಳಿದು ಬಂದಿದೆ.
ಪ್ಯಾರಾಗ್ಲೈಡರ್‌ನ್ನು ತಕ್ಷಣವೇ ಮನಾಲಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮಿಸುರ್ಕೋವಾ ಕಳೆದ ಆರು ವರ್ಷಗಳಿಂದ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದರು.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯನ್ನು ಪ್ಯಾರಾಗ್ಲೈಡಿಂಗ್ ಸ್ವರ್ಗ ಎಂದು ಕರೆಯಲಾಗುತ್ತದೆ. ಬಿರ್ ಬಿಲ್ಲಿಂಗ್‌ನಲ್ಲಿ ನವೆಂಬರ್ 2 ರಂದು ಪ್ಯಾರಾಗ್ಲೈಡಿಂಗ್ ವಿಶ್ವಕಪ್ 2024 ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ಹಿಮಾಚಲ ಪ್ರದೇಶದಲ್ಲಿ ಎರಡು ದಿನದಲ್ಲಿ ಇಬ್ಬರು ಪ್ಯಾರಾಗ್ಲೈಡರ್‌ಗಳು ಸಾವನ್ನಪ್ಪಿದ್ದಾರೆ.
ಮಂಗಳವಾರ ಬಿರ್-ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡರ್ ಒಬ್ಬರು ಮತ್ತೊಂದು ಗ್ಲೈಡರ್‌ಗೆ ಗಾಳಿಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬೆಲ್ಜಿಯಂ ಪ್ಯಾರಾಗ್ಲೈಡರ್ ಸಾವನ್ನಪ್ಪಿದ್ದರು. ಅಪಘಾತದ ನಂತರ ಅವರ ಪ್ಯಾರಾಚೂಟ್ ತೆರೆಯಲು ವಿಫಲವಾಗಿತ್ತು.