ಬೆಂಗಳೂರು: ಪೀಣ್ಯ ಫ್ಲೈಓವರ್ ಆಯ್ತು ಈಗ ಬೆಂಗಳೂರಿನ ಮತ್ತೊಂದು ಫ್ಲೈಓವರ್‍ನ ಕಳಪೆ ಕಾಮಗಾರಿ ಬಯಲಾಗಿದೆ. ಫ್ಲೈಓವರ್ ನ ಗ್ರಿಲ್ ಕಟ್ಟಾಗಿ ಬೃಹತ್ ಆಳ ಬಿದ್ದು ಕುಸಿಯುವ ಆತಂಕ ನಿರ್ಮಾಣ ಆಗಿದೆ.
ಹೌದು. ಬೆಂಗಳೂರಿನಂತಹ ಮಹಾನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ಲೈಓವರ್‍ಗಳಿವೆ. ಅದರಲ್ಲಿ ಕಳಪೆ ಕಾಮಗಾರಿಯಿಂದ ಬೇರಿಂಗ್‍ನಲ್ಲಿ ಬಿರುಕು ಬಿಟ್ಟಿದೆ ಅಂತಾ ಸುದ್ದಿ ಆದದ್ದು ಪೀಣ್ಯ ಮತ್ತು ಎಂಇಎಸ್ ಪ್ಲೈಓವರ್. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳದ ಕಡೆಗೆ ಸಾಗುವ ಎಂಇಎಸ್ ಪ್ಲೈಓವರ್ ಈಗ ಮತ್ತೆ ಸುದ್ದಿಯಲ್ಲಿದೆ. ಕಳೆದ ನಾಲ್ಕು ತಿಂಗಳಷ್ಠೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸರಿಪಡಿಸಿದ್ರು. ಈಗ ಮತ್ತೆ ಎಂಇಎಸ್ ಪ್ಲೈಓವರ್ ಮೇಲೆ ಕಬ್ಬಿಣದ ಗ್ರಿಲ್ ಕಟ್ಟಾಗಿ ಬೃಹತ್ ಆಳ ಬಿದ್ದಿದೆ. ಮೇಲೆ ನಿಂತು ನೋಡಿದ್ರೆ ಕೆಳಗಿನ ಅಂಡರ್ ಪಾಸ್ ಕಾಣುತ್ತೆ. ಹೀಗಿದ್ರು ವಾಹನ ಸವಾರರು ಅಪಾಯದಲ್ಲೆ ಓಡಾಡ್ತಿದ್ದಾರೆ. ಬೃಹತ್ ಗುಂಡಿ ಬಿದ್ದ ಜಾಗಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿದೆ.
ರೈಲ್ವೆ ಇಲಾಖೆ ಪ್ಲೈಓವರ್ ನಿರ್ಮಾಣ ಮಾಡಿದ್ದು ಬಿಬಿಎಂಪಿ ನಿರ್ವಹಣೆ ಮಾಡ್ತಿದೆ. ಆದರೆ ಕಳಪೆ ಕಾಮಗಾರಿ ಮತ್ತು ಅಸಮರ್ಪಕ ನಿರ್ವಹಣೆಯಿಂದ ಕಾಂಕ್ರೀಟ್ ಕಿತ್ತು ಬಂದು ಆಳ ಬಿದ್ದಿರೋದು ಅಪಾಯಕ್ಕೆ ದಾರಿ ಮಾಡಿಕೊಡ್ತಿದೆ. ಏಕೆ ಈ ರೀತಿ ಆಯ್ತು ಅಂತಾ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಅವರನ್ನ ಪ್ರಶ್ನೆ ಮಾಡಿದ್ರೆ ಉತ್ತರ ಕೊಡದೇ ಹೋಗ್ತಾರೆ. ಇದನ್ನೂ ಓದಿ: ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು
ಇನ್ನೂ ಬೃಹತ್ ಗುಂಡಿಯನ್ನ ಬಿಬಿಎಂಪಿ ಡಾಂಬಾರು ಹಾಕಿ ಮುಚ್ಚಿದ್ದಾರೆ. ತಾತ್ಕಾಲಿಕ ವ್ಯವಸ್ಥೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇವತ್ತು ರಾತ್ರಿ ಕಾಂಕ್ರೀಟ್ ಹಾಕಿ ಸರಿಪಡಿಸುತ್ತೆವೆ ಅಂತಾ ಪಬ್ಲಿಕ್ ಟಿವಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ದಿನಕ್ಕೆ ಲಕ್ಷಾಂತರ ವೆಹಿಕಲ್ ಓಡಾಡೋ ಪ್ಲೈಓವರ್ ಮೇಲೆ ಈ ರೀತಿ ಕುಸಿತ ಆಗಿರೋದು ಆತಂಕ ಹೆಚ್ಚಿಸಿದೆ. ಎಚ್ಚೆತ್ತುಕೊಳ್ಳದೆ ಇದ್ರೆ ಅಪಾಯಕಟ್ಟಿಟ್ಟ ಬುತ್ತಿ.