ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ (UI) ಸಿನಿಮಾದ ಮತ್ತೊಂದು ಪೋಸ್ಟರ್ (poster) ವಿಜಯ ದಶಕಮಿಗಾಗಿ ಬಿಡುಗಡೆಗೊಂಡಿದ್ದು, ಈ ಪೋಸ್ಟರ್ ಮೂಲಕವೂ ಉಪೇಂದ್ರ ನೋಡುಗರ ಮೆದುಳಿಗೆ ಹುಳು ಬಿಟ್ಟಿದ್ದಾರೆ. ಈ ಪೋಸ್ಟರ್ ಕೂಡ ವಿಭಿನ್ನವಾಗಿದ್ದು ನಾನಾ ಅರ್ಥಗಳನ್ನು ನೀಡುತ್ತಿದೆ. ಕೈಯಲ್ಲಿ ರಕ್ತಸಿಕ್ತ ಖಡ್ಗ, ಸೂರ್ಯನಿಗೆ ಮರೆಮಾಡಿ ನಿಂತಿರುವ ವ್ಯಕ್ತಿ, ವಿಶೇಷ ವೇಷಭೂಷಣ ಸೇರಿದಂತೆ ಹತ್ತು ಹಲವು ಸಂಗತಿಗಳು ಅಲ್ಲಿವೆ.
ವಿಭಿನ್ನ ಶೀರ್ಷಿಕೆಯಿಂದಾಗಿಯೇ ಈಗಾಗಲೇ ಗಮನ ಸೆಳೆದಿರುವ ಉಪೇಂದ್ರ,(Upendra) ಸಿನಿಮಾ ಟೈಟಲ್ ಏನನ್ನು ಧ್ವನಿಸುತ್ತದೆ ಎನ್ನುವ ಕುರಿತು ಈವರೆಗೂ ಹೇಳಿಲ್ಲ. ನೀವು ಟೈಟಲ್ ಅನ್ನು ಏನು ಬೇಕಾದರೂ ಕರೆದುಕೊಳ್ಳಿ ಎಂದು ನೋಡುಗರಿಗೆ ಅಂತಿಮ ಆಯ್ಕೆ ಬಿಟ್ಟಿದ್ದಾರೆ. ಹಲವು ದಿನಗಳಿಂದ ಭರದಿಂದ ಚಿತ್ರೀಕರಣವನ್ನೂ ಆರಂಭಿಸಿರುವ ಉಪ್ಪಿ, ಸಿನಿಮಾ ರಂಗದ ಅನೇಕ ಸಂಗತಿಗಳನ್ನೂ ಈ ಚಿತ್ರದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್
ಸಮಾಜ, ಮಾಧ್ಯಮ, ಕಾನೂನು, ಆಡಳಿತ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಹೀಗೆ ಸಾಕಷ್ಟು ವಿಷಯಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಉಪ್ಪಿ ಮಾತ್ರ ಈವರೆಗೂ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜಿ.ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಲಹರಿ ವೇಲು (Lahari Velu) ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.