ಬೆಳಗಾವಿ: ಖಾಸಗಿ ವೈದ್ಯರ ಮುಷ್ಕರಕ್ಕೆ ರಾತ್ರಿ ಮತ್ತೊಂದು ಮಗು ಜೀವಬಿಟ್ಟಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದೇ 45 ದಿನಗಳ ಕಂದಮ್ಮ ಅಸುನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಖೋಡದಲ್ಲಿ ಸಂಭವಿಸಿದೆ.
ಸುರೇಶ ವಡ್ರಾಳೆ ಹಾಗೂ ಶ್ರೀದೇವಿ ವಡ್ರಾಳೆ ದಂಪತಿಯ ಮಗು ವಿಪರೀತ ಜ್ವರದಿಂದ ಬಳಲುತ್ತಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ ಅಂತ ಹಾರೂಗೇರಿ ಹಾಗೂ ಮಂಗಳ ಪಟ್ಟಣದ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಕೊನೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಇನ್ನು ಗುರುವಾರ ರಾತ್ರಿ ಸಿಎಂ ಹಾಗೂ ಆರೋಗ್ಯ ಸಚಿವರು ಸೇರಿ ಹಲವರ ಜೊತೆ ಸಭೆ ನಡೆಸಿದ್ದರು. ಆದರೆ ಕೆಪಿಎಂಇ ಕಾಯ್ದೆಯಲ್ಲಿ ಕೆಲವು ಅಂಶಗಳನ್ನು ಕೈಬಿಡಲು ರಮೇಶ್‍ಕುಮಾರ್ ಒಪ್ಪದೇ ಸಭೆಯಿಂದ ಹೊರಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕಾಯ್ದೆ ಮಂಡಿಸಲೇಬೇಕು. ವೈದ್ಯರ ಪ್ರತಿಭಟನೆಗೆ ನಾನು ಹೆದರೋದಿಲ್ಲ ಎಂದು ಸಿಎಂ ಎದುರು ಗಟ್ಟಿ ಧ್ವನಿಯಲ್ಲಿ ಮಾತಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಧರಣಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.