‘ಲಕ್ಷ್ಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ಮಗ ಅನೂಪ್ (Anoop Revanna), ಆ ನಂತರ 2017ರಲ್ಲಿ ಬಿಡುಗಡೆಯಾದ ‘ಪಂಟ’ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಪುನಃ ಆರ್. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಚಿತ್ರದ ಮೂಲಕ ಅನೂಪ್ ರೀ ಎಂಟ್ರಿ ಕೊಡುತ್ತಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ಅನೂಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.
Advertisement
‘ಕಬ್ಜ’ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದಲ್ಲಿ ನಟಿಸಿದ ಅನುಭವ ಕುರಿತು ಮಾತನಾಡುವ ಅವರು, ‘ಉಪ್ಪಿ ಸಾರ್ ಬಲಗೈಭಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಉಪ್ಪಿ ಸಾರ್‌ಗೆ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ
Advertisement
Advertisement
‘ಕಬ್ಜ’ ಅಲ್ಲದೆ, ‘ಹೈಡ್ ಅಂಡ್ ಸೀಕ್’ ಎಂಬ ಇನ್ನೊಂದು ಚಿತ್ರದಲ್ಲೂ ಅನೂಪ್ ನಟಿಸಿದ್ದು, ಅದು ಸಹ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆಯಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು. ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಅದಕ್ಕೆ ಸರಿಯಾಗಿ ‘ಹೈಡ್ ಅಂಡ್ ಸೀಕ್’ ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ’ ಎನ್ನುತ್ತಾರೆ.
Advertisement
ಈ ಎರಡು ಚಿತ್ರಗಳಲ್ಲದೆ ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ ಅನೂಪ್. ಆದರೆ, ತಂದೆ ಹೆಚ್.ಎಂ. ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಅವರ ಪರ ಪ್ರಚಾರ ಮಾಡಬೇಕಿರುವುದರಿಂದ, ಈ ಎರಡೂ ಚಿತ್ರಗಳ ಬಿಡುಗಡೆಯ ನಂತರ ಒಂದು ಸಣ್ಣ ಗ್ಯಾಪ್ ಪಡೆಯಲಿದ್ದಾರಂತೆ. ಆಮೇಲೆ ಪುನಃ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಇನ್ನಷ್ಟು ಸಕ್ರಿಯವಾಗುವುದಾಗಿ ಹೇಳುತ್ತಾರೆ.