ನವದೆಹಲಿ: ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಕ್ಕಿಲ್ಲ.
ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 11:30ಕ್ಕೆ ಮೋದಿ (Narendra Modi) ನೂತನ ಕ್ಯಾಬಿನೆಟ್ ಸದಸ್ಯರಿಗೆ ತಮ್ಮ ನಿವಾಸದಲ್ಲಿ ಚಹಾ ಕೂಟ ಆಯೋಜಿಸಿದ್ದರು.
ಈ ಚಹಾಕೂಟಕ್ಕೆ ಯಾರಿಗೆಲ್ಲ ಕರೆ ಹೋಗಿದೆ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿರಲಿಲ್ಲ. ಹೀಗಾಗಿ ಅಣ್ಣಾಮಲೈ ಅವರಿಗೂ ಕರೆ ಹೋಗಿದೆ ಎಂಬ ವದಂತಿ ಹರಡಿತ್ತು. ಆದರೆ ಅಂತಿಮವಾಗಿ ಮೋದಿ ನಡೆಸಿದ ಸಭೆಯಲ್ಲಿ ಅಣ್ಣಾಮಲೈ ಭಾಗಿಯಾಗಿರಲಿಲ್ಲ.
ಬಿಜೆಪಿ ನಿಯಮದ ಪ್ರಕಾರ ಪಕ್ಷದ ಅಧ್ಯಕ್ಷ ಮತ್ತು ಮಂತ್ರಿಗಿರಿ ಒಬ್ಬರೇ ನಿರ್ವಹಿಸುವಂತಿಲ್ಲ. ಹೀಗಾಗಿ ಅಣ್ಣಾಮಲೈಗೆ ಮಂತ್ರಿ ಸ್ಥಾನ ಸಿಕ್ಕಿದರೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಈಗ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದನ್ನೂ ಓದಿ: ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ರಜನಿಕಾಂತ್
ತಮಿಳುನಾಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಣನೀಯ ಪ್ರಮಾಣದಲ್ಲಿ ಮತ ಗಳಿಕೆಯನ್ನು ಹೆಚ್ಚಿಸಿದೆ. ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇರವಾಗಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ 4 ಸ್ಥಾನಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿತ್ತು. 2026 ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರಿಗೆ ಪಕ್ಷ ಸಂಘಟಿಸುವ ಹೊಣೆಯನ್ನು ನೀಡಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ 3.6% ಮತ ಪಡೆದಿದ್ದರೆ ಈ ಬಾರಿ 10.72% ಮತ ಪಡೆದು ಮೂರನೇ ಸ್ಥಾನ ಪಡೆದಿದೆ. ಕೊಯಮತ್ತೂರಿನಲ್ಲಿ ಸ್ಪರ್ಧಿಸಿದ್ದ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋತಿದ್ದರು.