ಬೆಂಗಳೂರು: ಬಜೆಟ್ ನಲ್ಲಿ 2 ಕೆಜಿ ಕಡಿತಗೊಂಡಿದ್ದ ಅನ್ನಭಾಗ್ಯ ಅಕ್ಕಿ ಮತ್ತೆ 7 ಕೆಜಿಗೆ ಏರಿಕೆಯಾಗಲಿದ್ದು, ಬುಧವಾರ ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ.
ಹೌದು. ಅನ್ನಭಾಗ್ಯ ಅಕ್ಕಿ ಕಡಿತದಿಂದಾಗಿ ಸಮ್ಮಿಶ್ರ ಸರ್ಕಾರದಲ್ಲೇ ಅಸಮಾಧಾನ ಹೊರಬಿದ್ದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ರವರು ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.
Advertisement
ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಬಾರದು. 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿರುವುದು ಸರಿಯಲ್ಲ, ಕೂಡಲೇ ನೂತನ ಬಜೆಟ್‍ನಲ್ಲಿ ಹಳೇ ಯೋಜನೆಯನ್ನೇ ಮುಂದುವರಿಸಬೇಕೆಂದು ಸಿಎಂಗೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಸಮ್ಮಿಶ್ರ ಸರ್ಕಾರದ ನೂತನ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿಯವರು ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿ ಇಳಿಸಿದ್ದಕ್ಕೆ ಕೈ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಶಾಸಕ ಸುಧಾಕರ್ ಅವರು ಸದನದಲ್ಲೇ ಬಹಿರಂಗವಾಗಿ ಅಸಮಾಧಾನ ಪ್ರಕಟಿಸಿ ಈ ನಿರ್ಧಾರ ಬದಲಾಯಿಸಬೇಕೆಂದು ಎಂದು ಕೇಳಿಕೊಂಡಿದ್ದರು.
Advertisement
ಸಾರ್ವಜನಿಕರ ಜೊತೆ ಮೈತ್ರಿ ಪಕ್ಷದಲ್ಲೇ ಈ ನಿರ್ಧಾರಕ್ಕೆ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಜೆಟ್ ಕುರಿತ ಚರ್ಚೆಯ ವೇಳೆ ಕುಮಾರಸ್ವಾಮಿಯವರು 5 ಕೆಜಿಯಿಂದ 7 ಕೆಜಿಗೆ ಅನ್ನ ಭಾಗ್ಯದ ಅಕ್ಕಿ ಏರಿಕೆ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.