ಚಾಮರಾಜನಗರ: 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ (Rice) ಕೊಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಮಾಜಿ ಸಿಎಂ ಡಿವಿ ಸದಾನಂಗೌಡ (DV Sadananda Gowda) ಟಾಂಗ್ ನೀಡಿದ್ದಾರೆ.
ಚಾಮರಾಜನಗರದಲ್ಲಿ (Chamarajanagar) ಮಾತನಾಡಿದ ಅವರು, ಕೇಂದ್ರ ಅಕ್ಕಿ ಕೊಡುತ್ತಿಲ್ಲವೆಂಬ ಕಾಂಗ್ರೆಸ್ (Congress) ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕುಣಿಯಲಾರದವನು ನೆಲಡೊಂಕು ಅಂದನಂತೆ. ಹಾಗೆ ಏನೇನೋ ಸಬೂಬು ಹೇಳುತ್ತಿದ್ದಾರೆ. ಅಕ್ಕಿ ಕೊಡುತ್ತೇನೆ ಎಂದು ಹೇಳುವಾಗ ಇವರಿಗೆ ಪರಿಜ್ಞಾನ ಇರಲಿಲ್ವಾ? ನನಗೂ, ನಿಮಗೂ ನಮ್ಮ ಮನೆಯವರಿಗೂ, ನಿಮ್ಮ ಮನೆಯವರಿಗೂ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಟವಲ್ ಹೆಗಲಿನಿಂದ ಎಲ್ಲೋಯ್ತು? ಏನಾದ್ರೂ ಆಗ್ಲಿ ಕೊಡ್ತೀನಿ ಎಂದು ದೊಂಬರ ಲಾಗ ಹಾಕಿದ್ದರು. ಒಬ್ಬ ಸಿಎಂ ಆಗುವವನಿಗೆ ಮುಂದಾಲೋಚನೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಅಕ್ಕಿ ಮಾರಾಟ ಮಾಡಬಾರದು ಎಂಬ ನೀತಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿದ್ದಲ್ಲ. ಇದು ದೇಶದಲ್ಲಿ ಆಹಾರ ಭದ್ರತೆಗೆ ಕೇಂದ್ರ ಕೈಗೊಂಡ ನಿಲುವು. ಇದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕೇಂದ್ರ ಕೈಗೊಂಡ ನಿರ್ಧಾರ. ರಾಜ್ಯಕ್ಕೆ ಅಕ್ಕಿ ಕೊಡಬಾರದೆಂದು ಹೇಳುವ ನೀಚ ಬುದ್ದಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕಾಂಗ್ರೆಸ್‌ನವರಂತೆ ಚೀಪ್ ಪಾಲಿಟಿಕ್ಸ್ ಮಾಡಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ನಾವು ಮಾಡಲ್ಲ. ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೂ ಅಕ್ಕಿ ಸಿಗಬೇಕೆಂಬುದು ಬಿಜೆಪಿ ನಿಲುವು ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದರು.
ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ:
ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂಬ ಸ್ವಪಕ್ಷದ ನಾಯಕರ ಆರೋಪವನ್ನು ಸದಾನಂದಗೌಡ ಅಲ್ಲಗೆಳೆದಿದ್ದಾರೆ. ನಮ್ಮ ಪಕ್ಷದಲ್ಲಿ ಬಿಲ್‌ಕುಲ್ ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ನಡೆದಿಲ್ಲ. ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ರೆ ಖಂಡಿತ ನಾವು ಬಹುಮತ ಪಡೆಯುತ್ತಿದ್ದೆವು ಎಂದರು. ಇದನ್ನೂ ಓದಿ: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್ ನೋಡ್ತಿದ್ದೇವೆ: ಡಿಕೆಶಿ
ಗೆಲ್ಲುವ ನಿರೀಕ್ಷೆ ಇದ್ದ ಕಡೆಯು ಸಹ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಮಯ, ಸಂದರ್ಭ ನೋಡಿ ಪೊಲಿಟಿಕಲ್ ಸ್ಟ್ರಾಟಜಿ ಮಾಡಬೇಕು. ಅದನ್ನೆಲ್ಲಾ ಮಾಧ್ಯಮದವರ ಬಳಿ ಹೇಳಲು ಆಗಲ್ಲ. ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ರಾಜಕಾರಣದಲ್ಲಿ ಇರಬಾರದು ಅಂತೇನೂ ಇಲ್ಲ. ಯಾವಾಗ ಅವಶ್ಯಕತೆ ಇದೆ, ಆಗ ಮಾಡಬೇಕು ಎಂದು ಅವರು ಹೇಳಿದರು.
ಜು.3 ರೊಳಗೆ ವಿಪಕ್ಷ ನಾಯಕರ ನೇಮಕ:
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜುಗಲ್ ಬಂದಿಗೆ ಸವಾಲ್ ಹಾಕುವ ವಿಪಕ್ಷ ನಾಯಕನನ್ನು ಆರಿಸ್ತೇವೆ. ಅಧಿವೇಶನ ಪ್ರಾರಂಭವಾಗುವ ಮುನ್ನವೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಬೇಕಿತ್ತು. ಆದರೆ ಸೋಲಿನ ಪರಾಮರ್ಶೆ ಹಾಕಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕೆಂದಿರುವುದರಿಂದ ತಡವಾಗಿದೆ. ಜುಲೈ 3 ರೊಳಗೆ ಒಳ್ಳೆ ವಿಪಕ್ಷ ನಾಯಕನ ಆಯ್ಕೆ ಆಗಲಿದೆ. ನಮ್ಮ ರಾಷ್ಟ್ರೀಯ ನಾಯಕರು ಅಳೆದು ತೂಗಿ ವಿಪಕ್ಷ ನಾಯಕನ ಆಯ್ಕೆ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಒಂದು ಶಿಸ್ತು ಇದೆ. ಈ ಪ್ರಕಾರ ರಾಷ್ಟ್ರೀಯ ನಾಯಕರು ವಿಪಕ್ಷ ನಾಯಕ ಯಾರಾಗಬೇಕು ಎಂದು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!