ಹಾಸನ: ನಾಡಿನ ಜನರು ಸುಖ ಶಾಂತಿಯಿಂದ ಇರಬೇಕು ಜೊತೆಗೆ ಪತಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸಲು ಅನುಗ್ರಹ ನೀಡುವಂತೆ ಅನಿತಾ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.
ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ದೇವರ ಆಶೀರ್ವಾದದಿಂದ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಸಿಕ್ಕಿದೆ. ಚುನಾವಣೆ ನಂತರ ನಮಗೆ ಸಿಎಂ ಸ್ಥಾನ ಸಿಗಲಿದೆ ಎಂದು ನಾವು ಅಂದುಕೊಂಡಿರಲಿಲ್ಲ. ಹೀಗಾಗಿ ದೇವರು ಕೊಟ್ಟ ಅಧಿಕಾರವನ್ನು ಉಳಿಸು ಎಂದು ದೇವಿಯಲ್ಲಿ ಬೇಡಿಕೊಂಡಿದ್ದೇನೆ. ಹಾಗೆಯೇ ನಾಡಿನ ಜನರು ಸುಖ ಶಾಂತಿಯಿಂದ ಇರಬೇಕು. ಜೊತೆಗೆ ರೈತರ ಸಂಕಷ್ಟವನ್ನು ನಿವಾರಿಸು ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.
Advertisement
Advertisement
ರಾಮನಗರ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು ಉಳಿದ ನಾಲ್ಕು ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳೇ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಶಾಸಕಿಯಾದ ನಂತರ ಸಚಿವೆ ಸ್ಥಾನ ಸಿಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಮುಂದೆ ನೋಡೋಣ ಎಂದಷ್ಟೇ ಹೇಳಿ ನಕ್ಕರು. ಪುತ್ರ ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕೀಯ ಪ್ರವೇಶ ಮಾಡುವುದರ ಬಗ್ಗೆ ಮಾತನಾಡಿ, ಸದ್ಯಕ್ಕೆ ಆ ಬಗ್ಗೆ ಮನೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಮುಂದೆ ಏನಾಗುವುದೋ ಗೊತ್ತಿಲ್ಲ. ನಾನೂ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ ಎನ್ನುವ ಮೂಲಕ ಮಗ ಬಂದರೂ ಬರಬಹುದು ಎಂದು ಪರೋಕ್ಷವಾಗಿ ಹೇಳಿದರು.
Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಎಲ್ಲಾ ಕಡೆ ಕ್ರೀಯಾಶೀಲವಾಗಿ ಓಡಾಡಿದ್ದ. ಹಾಗಾಗಿ ನಿಖಿಲ್ ರಾಜಕೀಯ ಪ್ರವೇಶ ಮಾಡಬೇಕು ಎಂಬುದು ಅನೇಕರ ಒತ್ತಾಸೆ. ಅವನು ಏನೇ ಮಾಡಿದರೂ ನನ್ನ ಆಶೀರ್ವಾದ ಇರಲಿದೆ ಎಂದು ಅಭಯ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರ ಉತ್ತರಾಧಿಕಾರಿ ಪ್ರಜ್ವಲ್ ಎಂಬ ಮಾತಿದೆ ಎಂಬ ಪ್ರಶ್ನೆಗೆ ಯಾರಿಗೆ ಜನಬೆಂಬಲ, ದೇವರ ಆಶೀರ್ವಾದ ಇರುತ್ತೋ ಅವರು ಗೆಲ್ಲುತ್ತಾರೆ ಎಂದರು. ಇದೇ ವೇಳೆ ಬ್ಯಾಂಕ್ ನಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸಿಎಂ ಆದಷ್ಟು ಬೇಗ ಸರಿಪಡಿಸಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv