ರಾಮನಗರ: ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್‍ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಅಧಿಕೃತವಾಗಿ ಘೋಷಣೆಯಾಗಿದೆ.
ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದು, ತಾಲೂಕು ಜೆಡಿಎಸ್ ಮುಖಂಡರು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡರು ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರನ್ನ ಘೋಷಿಸಿದ್ರು.
Advertisement
Advertisement
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಜೊತೆ ಮಂಗಳವಾರದಂದು ಮುಖಂಡರು ಅಂತಿಮ ಮಾತುಕತೆ ನಡೆಸಿ ಎಚ್‍ಡಿಕೆಯವರ ಅನುಮತಿ ಪಡೆದು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.
Advertisement
Advertisement
ಚನ್ನಪಟ್ಟಣ ಮುಖಂಡರಾದ ಮಾಜಿ ಶಾಸಕ ಎಂ.ಸಿ ಅಶ್ವಥ್, ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಹಾಗೂ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ರಿಂದ ಅಭ್ಯರ್ಥಿ ಘೋಷಣೆಯಾಗಿದೆ. ಈಗಾಗಲೇ ಕಾರ್ಯಕರ್ತರ ಜೊತೆಗೆ ಪ್ರಮುಖ ಮುಖಂಡರು ಸಭೆ ನಡೆಸಿದ್ದಾರೆ.
ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಈ ಚುನಾವಣೆಯಲ್ಲಿ ಯೋಗೇಶ್ವರ್ ಅವರನ್ನು ಸೋಲಿಸಲು ಡಿಕೆಶಿ ಸರ್ವಪ್ರಯತ್ನ ನಡೆಸುತ್ತಿದ್ದು, ಈ ತಂತ್ರದ ಭಾಗವಾಗಿ ಅನಿತಾ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಅನಿತಾರನ್ನೇ ಬೆಂಬಲಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು.
2014ರ ಲೋಕಸಭಾ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೇ ಅಕ್ಟೋಬರ್ ನಲ್ಲಿ ಪಕ್ಷದ ವರಿಷ್ಠರ ನಿರ್ಧಾರದಿಂದ ಬೇಸತ್ತು ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದ್ದರು.
ಕೆಲ ದಿನಗಳಿಂದ ಪದೇ ಪದೇ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿರುವ ಅನಿತಾ ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇದೆ. ಕ್ಷೇತ್ರದ ಜನರು ಕೂಡ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ಗೆ ನೀಡಿದ್ದ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ತಿಳಿಸಿದ್ದರು.
ಕಳೆದ ಬಾರಿ ಇದೇ ಕ್ಷೇತ್ರದಿಂದ ಕಡಿಮೆ ಅಂತರದಿಂದ ಸೋತಿದ್ದೆ. ಹಾಗಾಗಿ ಈ ಬಾರಿ ನೀವು ನಿಲ್ಲಬೇಕು ಅಂತಾ ಅಲ್ಲಿನ ಜನರ ಒತ್ತಾಯವಿದ್ದು, ನನಗೂ ಅಲ್ಲಿಂದಲೇ ಸ್ಪರ್ಧಿಸುವ ಆಸೆ ಇದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಆಭ್ಯರ್ಥಿಗಳು ಇಲ್ಲ. ನನ್ನ ಬೆಂಬಲಕ್ಕೆ ನಿಂತಿರುವ ಕಾರ್ಯಕರ್ತರ ಹಿತಕ್ಕಾಗಿಯಾದ್ರು ನಾನು ಸ್ಪರ್ಧೆ ಮಾಡ್ತೀನಿ. ಇದರ ಬಗ್ಗೆ ಅಂತಿಮವಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅಂದು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಚುನಾವಣೆ ಬರುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್?