ಜೈಪುರ: ಸಣ್ಣ ಸಣ್ಣ ವಿಚಾರಕ್ಕೆ ಎಷ್ಟೋ ಮದುವೆಗಳು ಮುರಿದು ಬಿದ್ದ ವಿಚಾರಗಳನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಆದರೆ ಅದಕ್ಕೂ ಮೀರಿ ಇಲ್ಲೊಂದು ಘಟನೆ ನಡೆದಿದೆ. ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿದ್ದಕ್ಕೆ ಸಿಟ್ಟುಗೊಂಡ ವರನ ಕಡೆಯವರು ವಧುವಿನ ತಂದೆಯ ಮೂಗನನೇ ಕತ್ತರಿಸಿದ ವಿಲಕ್ಷಣ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಬಾರ್ಮರ್ ಝಪಾಲಿ ಎಂಬ ಪುಟ್ಟ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ವರನ ಕಡೆಯವರಿಂದ ಗಾಯಗೊಂಡವನನ್ನು ಕಮಲ್ ಸಿಂಗ್ ಭಾಟಿ ಎಂದು ಗುರುತಿಸಲಾಗಿದೆ. ಕಮಲ್ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವು ಸುವಲಾ ಗ್ರಾಮದಲ್ಲಿ ನಡೆಯುವುದಾಗಿ ನಿರ್ಣಯಿಸಲಾಗಿತ್ತು. ಆ ನಂತರ ಸುರಕ್ಷತೆಯ ದೃಷ್ಟಿಯಿಂದ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ವರನ ಕಡೆಯವರು ಹರಿತವಾದ ಆಯುಧದಿಂದ ವಧುವಿನ ತಂದೆಯ ಮೂಗನ್ನೇ ಕತ್ತರಿಸಿ ಹಾಕಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ
ಕ್ಯಾನ್ಸಲ್ ಯಾಕೆ..?: ಈ ಮೊದಲು ಕಮಲ್ ಸಿಂಗ್ ಅವರು ತನ್ನ ಸೋದರ ಸೊಸೆಯನ್ನು ಅದೇ ಮನೆಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಬಳಿಕ ಸೊಸೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಆದರೆ ಆಕೆಯನ್ನು ಪತಿ ಮನೆಯವರೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಕಮಲ್ ಗೆ ಸಿಕ್ಕಿತ್ತು. ಇತ್ತ ಮಾಹಿತಿ ಸಿಗುವುದಕ್ಕೂ ಮೊದಲು ತನ್ನ ಮಗಳನ್ನು ಅದೇ ಮನೆಯ ಸೊಸೆಯನ್ನಾಗಿ ಮಾಡುವ ಮಾತುಕತೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಿಶ್ಚಿತಾರ್ಥಕ್ಕೂ ಏರ್ಪಾಡು ಮಾಡಲಾಗಿತ್ತು. ಈ ಹೊತ್ತಲ್ಲೇ ಕೊಲೆ ಮಾಡಿರುವ ವಿಚಾರ ಕಮಲ್ ಸಿಂಗ್ ಗಮನಕ್ಕೆ ಬಂತು. ಹೀಗಾಗಿ ಮಗಳ ಸುರಕ್ಷತೆಯ ದೃಷ್ಟಿಯಿಂದ ಅವರು ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದರು. ಮದುವೆಯೂ ರದ್ದಾಯಿತು.
ಇದರಿಂದ ರೊಚ್ಚಿಗೆದ್ದ ವರನ ಮನೆಯವರು ದೊಣ್ಣೆ ಹಾಗೂ ಹರಿತವಾದ ಆಯುಧ ಹಿಡಿದ ವಧು ಕಡೆಯವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಮಲ್ ಸಿಂಗ್ ಮೂಗು ಕತ್ತರಿಸಿ ಹಾಕಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಕಮಲ್ ಸಿಂಗ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.