– ರೈಲು ಸಂಚಾರ ಸ್ಥಗಿತ: 6,000 ಪ್ರಯಾಣಿಕರ ಪರದಾಟ
ಅಮರಾವತಿ: ಆಂಧ್ರಪ್ರದೇಶ (Andhra Pradesh) ಹಾಗೂ ತೆಲಂಗಾಣದಲ್ಲಿ (Telangana) ಭಾರೀ ಮಳೆಯಾಗುತ್ತಿದ್ದು (Rain) ಪ್ರವಾಹದಿಂದ (Flood) ಎರಡು ರಾಜ್ಯಗಳಿಂದ ಸೇರಿ 27 ಜನ ಸಾವಿಗೀಡಾಗಿದ್ದಾರೆ. ಮೂವರು ಕಣ್ಮರೆಯಾಗಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಮಳೆಯ ಪರಿಣಾಮದಿಂದ ಸತ್ತವರ ಪೈಕಿ 12 ಮಂದಿ ಆಂಧ್ರಪ್ರದೇಶದವರಾಗಿದ್ದು, 15 ಮಂದಿ ತೆಲಂಗಾಣದವರಾಗಿದ್ದಾರೆ. ಇನ್ನೂ ಮಳೆಯ ಅಬ್ಬರಕ್ಕೆ ರಸ್ತೆಗಳು ಜಲಾವೃತಗೊಂಡಿದ್ದು ಕೆಲವೆಡೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಹಲವೆಡೆ ರಕ್ಷಣಾ ಕಾರ್ಯಾಚರಣೆಗಳಿಗೂ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
97 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೇ 140 ರೈಲುಗಳು ರದ್ದುಪಡಿಸಲಾಗಿದೆ. ಇದರಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ವಿಜಯವಾಡದ ದುಃಖದ ನದಿ ಎಂದು ಕರೆಯಲ್ಪಡುವ ಬುಡಮೇರು ವಾಗು ನದಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಈ ನದಿ ಸಮೀಪದ ಪ್ರದೇಶಗಳ ಸುಮಾರು 17,000ಕ್ಕೂ ಹೆಚ್ಚು ಜನರನ್ನು ರಕ್ಷಣಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ತೀವ್ರ ಪ್ರವಾಹವನ್ನು ಅನುಭವಿಸಿದ ವಿಜಯವಾಡ ಒಂದರಲ್ಲೇ 2.76 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹದ ವಿಚಾರವಾಗಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಕೇಂದ್ರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನಿಡಿದ್ದಾರೆ.
ಸೆ.2 ರಿಂದ 5 ರವರೆಗೆ ನಾಲ್ಕು ದಿನಗಳ ಕಾಲ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.