ಮಂಡ್ಯ: 2019 ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಹತ್ತಿರವಾಗುತ್ತಿದಂತೆ ಮಂಡ್ಯ ಚುನಾವಣಾ ರಂಗೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಪರ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ ನಡೆಸಲಿದ್ದಾರೆ.
ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ವೇಳೆ ಸಿಎಂ ಕುಮಾರಸ್ವಾಮಿ ಅವರು ನಾಯ್ಡು ಆಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಬಳಿಕ ಸೋಮವಾರ ಮಂಡ್ಯ ಅಖಾಡಕ್ಕೆ ಚಂದ್ರಬಾಬು ನಾಯ್ಡು ಅವರು ಇಳಿಯಲಿದ್ದಾರೆ. ಪ್ರಮುಖವಾಗಿ ಮೇಲುಕೋಟೆ, ಪಾಂಡವಪುರದಲ್ಲಿ ನಾಯ್ಡು ಅವರು ಪ್ರಚಾರ ಕೈಗೊಳ್ಳಲಿದ್ದಾರೆ. ಆ ಮೂಲಕ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತಯಾಚನೆ ಮಾಡಲಿದ್ದಾರೆ.
Advertisement
Advertisement
ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಭಾಗವಾಗಿ ಆಂಧ್ರಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆದಿದ್ದು, ಏ.11 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವ ಪರಿಣಾಮ ಚಂದ್ರಬಾಬು ನಾಯ್ಡು ಅವರು ವಿವಿಧ ರಾಜ್ಯಗಳಲ್ಲಿ ಅಪ್ತರ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ.
Advertisement
ಕೆಲದಿನಗಳ ಹಿಂದೆಯಷ್ಟೇ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಚ್‍ಡಿ ದೇವೇಗೌಡ ಅವರು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಸನ್ನಿವೇಶದಲ್ಲಿ ಮಹತ್ವದ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ. ಅವರು ಯಾಕೆ ದೇಶದ ಪ್ರಧಾನಿಯಾಗಬಾರದು ಎಂದು ಪ್ರಶ್ನಿಸುವ ಮೂಲಕ ನಾಯ್ಡು ಹೆಸರನ್ನು ಮುನ್ನೆಲೆಗೆ ತಂದಿದ್ದರು.